ಪಂಪ್ ವೆಲ್, ತೊಕ್ಕೋಟು ಮೇಲ್ಸೇತುವೆ ಕಾಮಗಾರಿಗೆ ವಿಳಂಬಕ್ಕೆ ಮೆಸ್ಕಾಂ ಮೂಲಕ ಕುತಂತ್ರ ?

ಮಂಗಳೂರು, ಎಪ್ರಿಲ್ 09: ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ವೈಫಲ್ಯದ ಪಟ್ಟಿಯಲ್ಲಿ ಅತ್ಯಂತ ಮುಂಚೂಣಿ ಸ್ಥಾನವನ್ನು ಪಂಪುವೆಲ್ ಹಾಗೂ ತೊಕ್ಕೋಟು ಮೇಲ್ಸೇತುವೆ ಪಡೆದುಕೊಂಡಿದೆ.

ಈ ಎರಡೂ ಮೇಲ್ಸೇತುವೆಗಳ ಕಾಮಗಾರಿ ಆರಂಭಗೊಂಡು ಹತ್ತು ವರ್ಷಗಳೇ ಕಳೆದಿದ್ದರೂ, ಕಾಮಗಾರಿ ಮಾತ್ರ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಕಾಮಗಾರಿಯನ್ನು ವಹಿಸಿಕೊಂಡ ನವಯುಗ ಕಂಪನಿಯ ಆರ್ಥಿಕ ದಿವಾಳಿತನ ಹಾಗೂ ಕಾಮಗಾರಿಗೆ ಬೇಕಾದ ಭೂಮಿಯ ಹಸ್ತಾಂತರ ಪ್ರಕ್ರಿಯೆಯಲ್ಲಿ ವಿಳಂಬ ಈ ಕಾಮಗಾರಿ ಆಮೆಗತಿಯಲ್ಲಿ ಸಾಗಲು ಕಾರಣವಾಗಿದೆ.

ಇದೀಗ ಎರಡೂ ಮೇಲ್ಸೇತುವೆಗಳ ಕಾಮಗಾರಿಯನ್ನು ಮೇ ತಿಂಗಳ ಕೊನೆಯ ವಾರದಲ್ಲಿ ಮುಗಿಸಿಕೊಡುವುದಾಗಿ ನವಯುಗ ಕಂಪನಿಯು ಈಗಾಗಲೇ ಭರವಸೆಯನ್ನೂ ನೀಡಿದೆ. ಆದರೆ ಮೆಸ್ಕಾಂ ಇಲಾಖೆ ಈ ಕಾಮಗಾರಿಗೆ ತಡೆಯೊಡ್ಡುವಂತಹ ಪ್ರಯತ್ನದಲ್ಲಿ ತೊಡಗಿಕೊಂಡಿದೆ ಎನ್ನುವ ವಿಚಾರ ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ತೊಕ್ಕೋಟು ಆರಂಭಗೊಳ್ಳುವಲ್ಲಿ ಹಾಗೂ ಪಂಪುವೆಲ್ ಮೇಲ್ಸೇತುವೆಯ ಮಧ್ಯಭಾಗದಲ್ಲೇ ಮೆಸ್ಕಾಂ ನ ಎರಡು ಕರೆಂಟ್ ಲೈನ್ ಗಳು ಹಾದು ಹೋಗಿವೆ. ಪಂಪ್ ವೆಲ್ ನಲ್ಲಿ ಮೇಲ್ಸೇತುವೆಯ ಕಾಮಗಾರಿ ನಡೆಯುತ್ತಿದ್ದರೂ, ಕರೆಂಟ್ ಲೈನ್ ಗಳನ್ನು ತೆರವುಗೊಳಿಸುವ ಕಾರ್ಯವನ್ನು ಮೆಸ್ಕಾಂ ಈವರೆಗೂ ಮಾಡಿಲ್ಲ.

ಇದರ ಹಿಂದೆ ಜಿಲ್ಲೆಯ ಕೆಲವು ರಾಜಕಾರಣಿಗಳ ಕೈವಾಡವೂ ಇರುವ ಸಾಧ್ಯತೆಯನ್ನು ಸ್ಥಳೀಯರು ಇದೀಗ ವ್ಯಕ್ತಪಡಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವ ವರೆಗೂ ಕಾಮಗಾರಿಯು ಮುಕ್ತಾಯವಾಗಬಾರದು ಎನ್ನುವ ದುರುದ್ಧೇಶ ಇದರ ಹಿಂದಿರುವ ಸಾಧ್ಯತೆಯು ಕಂಡು ಬರುತ್ತಿದೆ.

ಮೇಲ್ಸೇತುವೆಗೆ ರಸ್ತೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲೇ ಈ ಕರೆಂಟ್ ಲೈನ್ ಹಾದು ಹೋಗುತ್ತಿದ್ದು, ಇದನ್ನು ತೆರವುಗೊಳಿಸದೇ ಹೋದಲ್ಲಿ ಕಾಮಗಾರಿಯು ಅಂತಿಮ ಹಂತಕ್ಕೆ ತಲುಪುವುದು ಕಷ್ಟಸಾಧ್ಯವೆಂದು ತಿಳಿದೇ ಮೆಸ್ಕಾಂ ಮೂಲಕ ಈ ಕುತಂತ್ರ ಹಣೆಯಲಾಗಿದೆಯೋ ಎನ್ನುವ ಸಂಶಯವೂ ಮೂಡಲಾರಂಭಿಸಿದೆ.

ಕಾಂಗ್ರೇಸ್ ಸೇರಿದಂತೆ ಬಿಜೆಪಿಯೇತರ ಎಲ್ಲಾ ಪಕ್ಷಗಳೂ ಪಂಪುವೆಲ್ ಮೇಲ್ಸೇತುವೆಯನ್ನೇ ಪ್ರಮುಖ ವಿಚಾರವನ್ನಾಗಿಟ್ಟು ಇಂದು ಹಾಲಿ ಸಂಸದ ನಳಿನ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ನಡುವೆಯೇ ಕಾಮಗಾರಿಯನ್ನು ವಿಳಂಬಗೊಳಿಸುವ ಕುತಂತ್ರವೊಂದು ಇದೀಗ ಬೆಳಕಿಗೆ ಬಂದಿದೆ.