ಶಾಲಾ ಕಾಲೇಜುಗಳಲ್ಲಿ ಮನೋರಂಜನಾ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಹಾಡಿಗೆ ಕಡಿವಾಣ ಹಾಕಲು ಜಿಲ್ಲಾಧಿಕಾರಿಗೆ ದೂರು

ಮಂಗಳೂರು ಮಾರ್ಚ್ 13: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಹಲವು ವಿದ್ಯಾ ಸಂಸ್ಥೆಗಳಲ್ಲಿ ವಾರ್ಷಿಕೋತ್ಸವ, ಕ್ರೀಡೋತ್ಸವ , ಟ್ಯಾಲೆಂಟ್ಸ್ ಡೇ ಮುಂತಾದ ಕಾರ್ಯಕ್ರಮದ ಹೆಸರಿನಲ್ಲಿ ಕೋಮು ಪ್ರಚೋದನಕಾರಿ ‘ಭಜರಂಗಿ ಭಜರಂಗಿ’ ಹಾಡುಗಳಿಗೆ ಕುಣಿಯುವುದು ಅಲ್ಲದೆ ಇಂತಹ ಕಾರ್ಯಕ್ರಮಗಳಲ್ಲಿ ಕೇಸರಿ ಧ್ವಜ ಮತ್ತು ಬಂಟಿಂಗ್ಸ್ ಗಳಿಂದ ಅಲಂಕರಿಸುತ್ತಿರುವುದು ಜಿಲ್ಲೆಯ ಬೆಟ್ಟಂಪಾಡಿ ಸರ್ಕಾರಿ ಕಾಲೇಜು ಪುತ್ತೂರು, ಸಿದ್ದಕಟ್ಟೆ ಸರ್ಕಾರಿ ಕಾಲೇಜು ಹಾಗೂ ಕಳೆದ ವರ್ಷ ವಿವೇಕಾನಂದ ಲಾ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಮುಂತಾದ ಕಡೆಗಳಲ್ಲಿ ಇಂತಹ ಘಟನೆಗಳು ಕಂಡುಬಂದಿದೆ, ಇದರ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಯಿತು.

ಖಾಸಗಿ ಮತ್ತು ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ಎಲ್ಲಾ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಉದ್ದೇಶಪೂರ್ವಕವಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದು ಇತರ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ಆರೋಪಿಸಲಾಗಿದೆ.

ಆದುದರಿಂದ ಜಿಲ್ಲೆಯ ಕೋಮು ಸೌಹಾರ್ದತೆಯನ್ನು ಕಾಪಾಡುವ ಉದ್ದೇಶದಿಂದ ಇಂತಹ ಪ್ರಚೋದನಕಾರಿ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಪದವಿಪೂರ್ವ ಶಿಕ್ಷಣ ಇಲಾಖೆ , ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಶೀಘ್ರ ಆದೇಶ ಹೊರಡಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ಆಗ್ರಹಿಸಿದೆ.