KARNATAKA
ಮಡಿಕೇರಿಯಲ್ಲಿ ಏಳು ಮಂದಿಯನ್ನು ಸುಟ್ಟು ಕೊಂದಿದ್ದ ಬೋಜ ಶವವಾಗಿ ಪತ್ತೆ..!
ಮಡಿಕೇರಿ : ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಾಲ್ವರು ಮಕ್ಕಳು ಸೇರಿದಂತೆ 7 ಮಂದಿ ಸಾವಿಗೆ ಕಾರಣನಾಗಿದ್ದ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ. ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದ ಬೋಜ (55) ಶವವಾಗಿ ಪತ್ತೆಯಾಗಿರುವ ಆರೋಪಿಯಾಗಿದ್ದಾನೆ.
ಘಟನೆ ಬಳಿಕ ಆರೋಪಿ ಬೋಜ ನಾಪತ್ತೆಯಾಗಿದ್ದನು. ಪೊನ್ನಂಪೇಟೆ ಠಾಣೆ ಪೊಲೀಸರು ಈತನಿಗಾಗಿ ಶೋಧ ನಡೆಸುತ್ತಿದ್ದರು. ಈ ನಡುವೆ ಗದ್ದೆಯಲ್ಲಿ ಬೋಜನ ಶವ ಕಂಡು ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ನಾಕೂರು ನರೇಶ್ ಎಂಬುವರ ಕಾಫಿ ತೋಟದಲ್ಲಿ ಇಂದು ಬೆಳಗ್ಗೆ ಬೋಜನ ಮೃತ ದೇಹ ಪತ್ತೆಯಾಗಿದೆ.
ಘಟನೆ ಬಳಿಕ ಈತ ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಏಪ್ರಿಲ್ ಮೂರರಂದು ಅಳಿಯನ ಮನೆಯಲ್ಲಿ ಮಲಗಿದ್ದ ತನ್ನ ಪತ್ನಿ ಮತ್ತು ಇತರ ಐವರನ್ನು ಪೆಟ್ರೋಲ್ ಸುರಿದು ಈತ ಬರ್ಬರವಾಗಿ ಕೊಂದಿದ್ದ.
ಘಟನೆ ಬಳಿಕ ಬೋಜ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಕೊಡಗು ಪೊಲೀಸ್ ಕಾರ್ಯಾಚರಣೆ ನಡೆಸಿತ್ತು. ಇದರ ಮಧ್ಯೆಯೇ ಬೋಜನ ದೇಹ ಪತ್ತೆಯಾಗಿದೆ.
ದೇಹ ಕೊಳೆತ ಸ್ಥಿತಿಯಲ್ಲಿದ್ದು ಘಟನೆ ನಡೆದ ದಿನವೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ.
ಇನ್ನು ಜೀವಂತ ದಹನ ಪ್ರಕರಣದಲ್ಲಿ ತೀವ್ರ ಗಾಯಗೊಂಡಿದ್ದ ಭಾಗ್ಯ(40) ಮತ್ತು ಪಾಚೆ(60) ಎಂಬುವವರನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆ ಪೈಕಿ ಭಾಗ್ಯ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಇಬ್ಬರು ಮಕ್ಕಳು ಘಟನೆ ನಡೆದ ದಿನವೇ ಸಾವನ್ನಪ್ಪಿದ್ದರು. ಇದೀಗ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕಳೆದುಕೊಂಡು ಅನಾಥವಾಗಿರುವ ಪತಿ ತೋಲನ ಗೋಳು ಮುಗಿಲು ಮುಟ್ಟಿದೆ.
You must be logged in to post a comment Login