LATEST NEWS
ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಕಿರುಕುಳ ಪ್ರಕರಣ – ಮನೋಹರ್ ಪಿರೆರಾ ಮನೆಗೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರು, ಡಿಸೆಂಬರ್ 29: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಮನೋಹರ್ ಪಿರೇರಾ ಅವರ ಮನೆಗೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿ ಕುಟುಂಬಸ್ಥರ ಅಹವಾಲು ಆಲಿಸಿದ್ದಾರೆ.
ಮನೋಹರ್ ಪಿರೇರಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಕಾರಣ ಎಂದು ಹೇಳಿ ತಮ್ಮ ಕೊನೆಯ ವಾಟ್ಸಾಪ್ ವಿಡಿಯೋ ಮಾಡಿದ್ದರು. ತನ್ನ ಸಾಲವನ್ನು ಮರುಪಾವತಿಸಲು ನೀಡಿದ ಹಣವನ್ನು ಸಾಲಕ್ಕೆ ಜಮೆ ಮಾಡದೆ 9 ಲಕ್ಷ ರೂಪಾಯಿ ಯನ್ನು ಅನಿಲ್ ಲೋಬೊ ತಿಂದಿದ್ದಾನೆ ಎಂದು ಹೇಳಿದ್ದರು.
ಮನೋಹರ್ ಪಿರೇರಾ ಕುಟುಂಬಕ್ಕೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿ ಪರಿಸರದ ನೂರಾರು ಮಂದಿ ಸಹಿಯನ್ನೊಳಗೊಂಡ ಮನವಿಯನ್ನು ರಾಜ್ಯದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಮುಖ್ಯಮಂತ್ರಿಗಳು, ಗೃಹ ಸಚಿವರು, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ರವರಿಗೆ ನೀಡಲಾಗಿತ್ತು. ಮನವಿಗೆ ಸ್ಪಂದಿಸಿದ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಅವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾoತ್ವನ ಹೇಳಿದ್ದಾರೆ. ನಿಷ್ಪಕ್ಷ ತನಿಖೆಗೆ ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿರುತ್ತಾರೆ. ಎಂಸಿ ಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊನಿಂದ ತೊಂದರೆಗೊಳಗಾದ ಇತರ ಗ್ರಾಹಕರು ಸ್ಥಳದಲ್ಲಿ ಹಾಜರಿದ್ದು ತಮ್ಮ ಅಳಲನ್ನು ಯು.ಟಿ. ಖಾದರ್ ಬಳಿ ತೋಡಿಕೊಂಡರು. ಸ್ಥಳೀಯರು ವಿಧಾನ ಸಭಾಧ್ಯಕ್ಷ ಯು. ಟಿ ಖಾದರ್ ಬಳಿ ದಿವಂಗತ ಮನೋಹರ್ ಅವರ ಬದುಕಿನ ಕಷ್ಟಗಳನ್ನು ವಿವರಿಸಿದರು. ಅವರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು.