Connect with us

    LATEST NEWS

    ಬೆಲೆ ಏರಿಕೆ ಬಿಸಿ – 14 ವರ್ಷಗಳ ಬಳಿಕ ಬೆಂಕಿ ಪೊಟ್ಟಣದ ಬೆಲೆ ಏರಿಕೆ

    ಚೆನ್ನೈ: ಬೆಲೆ ಏರಿಕೆ ಬಿಸಿ ಇದೀಗ ಬೆಂಕಿ ಪೊಟ್ಟಣಕ್ಕೂ ತಟ್ಟಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ಬೆಂಕಿ ಪೊಟ್ಟಣದ ಬೆಲೆ ಏರಿಕೆಯಾಗಿದೆ. ಡಿಸೆಂಬರ್ 1ರಿಂದ ಬೆಂಕಿಪೊಟ್ಟಣದ ಬೆಲೆ 2 ರೂಪಾಯಿ ಆಗಲಿದೆ.


    ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯ ಹಾದಿಯಲ್ಲಿದೆ. ಇದರ ಪರಿಣಾಮ ಈಗಾಗಲೇ ಬಹುತೇಕ ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಆದರೆ ಇದುವರೆಗೆ ಬೆಂಕಿ ಪೊಟ್ಟಣದ ಬೆಲೆ ಮಾತ್ರ ಏರಿಕೆಯಾಗಿರಲಿಲ್ಲ. ಆದರೆ ಇದೀಗ ತಮಿಳುನಾಡಿನ ಶಿವಕಾಶಿಯಲ್ಲಿ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಸ್ ಸಭೆಯಲ್ಲಿ 14 ವರ್ಷಗಳ ಬಳಿಕ ಬೆಂಕಿಪೊಟ್ಟಣದ ಬೆಲೆಯನ್ನು ಏರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

    ಈ ಹಿಂದೆ 50 ಪೈಸೆ ಇದ್ದ ಬೆಂಕಿ ಪೊಟ್ಟಣದ ಬೆಲೆಯನ್ನು 2007ರಲ್ಲಿ ಪರಿಷ್ಕರಿಸಲಾಗಿತ್ತು. ಆಗ ಬೆಂಕಿ ಪೊಟ್ಟಣದ ಬೆಲೆಯನ್ನು 50 ಪೈಸೆಯಿಂದ 1 ರೂಪಾಯಿಗೆ ಹೆಚ್ಚಿಸಲಾಗಿತ್ತು. ಗುರುವಾರ ಶಿವಕಾಶಿಯಲ್ಲಿ ಮುಕ್ತಾಯಗೊಂಡ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚೆಸ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕಚ್ಚಾ ಸಾಮಗ್ರಿಗಳಲ್ಲಿ ಆಗುತ್ತಿರುವ ಬೆಲೆ ಹೆಚ್ಚಳವೇ ಈ ಬೆಲೆ ಏರಿಕೆಗೆ ಕಾರಣ ಎಂದು ಉದ್ಯಮ ಪ್ರತಿನಿಧಿಗಳು ಹೇಳಿದ್ದಾರೆ.


    ಬೆಂಕಿಕಡ್ಡಿಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಒಂದು ಕೆಜಿ ಕೆಂಪು ರಂಜಕ ರೂ. 425 ರಿಂದ ರೂ. 810 ಕ್ಕೆ, ಮೇಣ ರೂ. 58 ರಿಂದ ರೂ. 80 ಕ್ಕೆ, ಹೊರ ಬಾಕ್ಸ್ ಬೋರ್ಡ್ ರೂ. 36 ರಿಂದ ರೂ. 55 ಕ್ಕೆ ಮತ್ತು ಒಳ ಪೆಟ್ಟಿಗೆ ಬೋರ್ಡ್ ರೂ. 32 ರಿಂದ ರೂ. 58 ಕ್ಕೆ ಏರಿಕೆಯಾಗಿದೆ.

    ಅಕ್ಟೋಬರ್ 10 ರಿಂದ ಪೇಪರ್, ಸ್ಪ್ಲಿಂಟ್ಸ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ಉದ್ಯಮದ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಹೀಗಾಗಿ ಬೆಂಕಿಪೊಟ್ಟಣ ತಯಾರಕರು ಬೆಲೆಯೇರಿಕೆಯ ನಿರ್ಧಾರವನ್ನು ಅವಿರೋಧವಾಗಿ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಸದ್ಯ 600 ಬೆಂಕಿ ಪೊಟ್ಟಣಗಳ ಒಂದು ಬಂಡಲ್ 270ರಿಂದ 300 ರೂಪಾಯಿಗೆ ಮಾರಾಟವಾಗುತ್ತಿದೆ. ಅದನ್ನು 430ರಿಂದ 480 ರೂಪಾಯಿಗೆ ಏರಿಸಲು ನಿರ್ಧರಿಸಲಾಗಿದೆ

    Share Information
    Advertisement
    Click to comment

    You must be logged in to post a comment Login

    Leave a Reply