ಬೆಳ್ತಂಗಡಿ ಡಿಸೆಂಬರ್ 17: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾಗಿ ಬಂದ ಬಳಿಕ ಸುಳ್ಳು ಸಾಕ್ಷಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಆರೋಪಿ ಚಿನ್ನಯ್ಯನಿಗೆ ಇದೀಗ ಬಿಡುಗಡೆ ಭಾಗ್ಯ ಸಿಕ್ಕಿದೆ. ದ.ಕ ಜಿಲ್ಲಾ ಕೋರ್ಟ್ ನವೆಂಬರ್ 24ರಂದು 12 ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದ್ದರೂ ಬಾಂಡ್ ಮತ್ತು ಇಬ್ಬರು ಜಾಮೀನುದಾರರ ಕೊರೆತೆಯಿಂದ 23 ದಿಗಳಿಂದ ಬಿಡುಗಡೆ ಭಾಗ್ಯ ಬಂದಿರಲಿಲ್ಲ. ಇದೀಗ ಒಂದು ಲಕ್ಷ ಬಾಂಡ್, ಇಬ್ಬರು ಜಾಮೀನುದಾರರಿಂದ ಬೆಳ್ತಂಗಡಿ ಕೋರ್ಟ್​​​​​​​ಗೆ ಶ್ಯೂರಿಟಿ ನೀಡಲಾಗಿದೆ. ಇದರಿಂದ ಆರೋಪಿ ಬುರುಡೆ ಚಿನ್ನಯ್ಯ ಬಿಡುಗಡೆಗೆ ನ್ಯಾಯಾಧೀಶರು ಅಸ್ತು ಎಂದಿದ್ದಾರೆ.


ಆರೋಪಿ ಚಿನ್ನಯ್ಯನಿಗೆ ಸಹಾಯ ಮಾಡಲು ಪತ್ನಿ ಮಲ್ಲಿಕಾ ಮೂಲಕ ಬೆಳ್ತಂಗಡಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯಕ್ಕೆ ಡಿ.17 ರಂದು ಒಂದು ಲಕ್ಷದ ಬಾಂಡ್ ನೀಡಲು ಮತ್ತು ಇಬ್ಬರು ಜಾಮೀನದಾರರನ್ನು ಕರೆದು ಕೊಂಡು ಬಂದು ಕಾನೂನು ಪಕ್ರಿಯೆ ಮುಗಿಸಿ ಶಿವಮೊಗ್ಗ ಜೈಲಿನತ್ತ ಪ್ರಯಾಣ ಮಾಡಿದ್ದಾರೆ.

ಇನ್ನೂ ಬೆಳ್ತಂಗಡಿ ನ್ಯಾಯಾಲಯದಲ್ಲಿ ಬಿಡುಗಡೆ ಆದೇಶ ಪತ್ರ ಮೇಲ್ ಮೂಲಕ ಶಿವಮೊಗ್ಗ ಜೈಲಿಗೆ ತಲುಪಿದ ಬಳಿಕ ಜೈಲಿನಿಂದ ಚಿನ್ನಯ್ಯ ಡಿ.17 ರಂದು ಸಂಜೆ ವೇಳೆಗೆ ಬಿಡುಗಡೆಯಾಗಲಿದ್ದಾನೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.


ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನಾಲ್ಕು ತಿಂಗಳಿಂದ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನಿಗೆ ನವೆಂಬರ್ 24ರಂದು ಜಾಮೀನು ಸಿಕ್ಕಿತ್ತು. 1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿಯೊಂದಿಗೆ 12 ಷರತ್ತು ವಿಧಿಸಿ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಆದ್ರೆ, ಜಾಮೀನು ಸಿಕ್ಕಿದರೂ ಚಿನ್ನಯ್ಯನಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಹೀಗಾಗಿ ಜಾಮೀನು ಆದೇಶ ಬಳಿಕ 23 ದಿನಗಳಿಂದ ಚಿನ್ನಯ್ಯ ಶಿವಮೊಗ್ಗ ಜೈಲಿನಲ್ಲಿರಬೇಕಾಗಿತ್ತು.

ಅಂತಿಮವಾಗಿ ಜಾಮೀನು ಸಿಕ್ಕು 23 ದಿನಗಳ ಬಳಿಕ ಚಿನ್ನಯ್ಯ ಜೈಲಿನಿಂದ ಬಿಡುಗಡೆಯಾಗುತ್ತಿದ್ದು, ಆಚೆ ಬಂದ ಬಳಿಕ ಧರ್ಮಸ್ಥಳ ಪ್ರಕರಣ ಸಂಬಂಧ ಏನಾದರೂ ಮಾಹಿತಿ ಬಹಿರಂಗಪಡಿಸಬಹುದು ಎನ್ನುವ ಕುತೂಹಲ ಮೂಡಿಸಿದೆ.

Share Information