Connect with us

    LATEST NEWS

    6 ರೇಪ್​ ಕೇಸ್​ ಸೇರಿ ಅನೇಕ ಅಪರಾಧಗಳು: ಸರ್ಕಲ್​ ಇನ್ಸ್​ಪೆಕ್ಟರ್​ ವಜಾ, 58ಕ್ಕೂ ಹೆಚ್ಚು ಅಧಿಕಾರಿಗಳಿಗೆ ಸಂಕಷ್ಟ

    ಕೊಚ್ಚಿ, ಜನವರಿ 10: ಗ್ಯಾಂಗ್​ರೇಪ್​​ ಸೇರಿದಂತೆ ಹಲವು ಕ್ರಿಮಿನಲ್​ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತು ಕೊಯಿಕ್ಕೋಡನ್​ ಬೇಪೋರ್​ ಪಟ್ಟಣದ ಸರ್ಕಲ್​ ಇನ್ಸ್​ಪೆಕ್ಟರ್​ ಪಿ.ಆರ್​. ಸುನು ಸೇವೆಯಿಂದ ವಜಾಗೊಂಡ ಬೆನ್ನಲ್ಲೇ ತಮ್ಮ ಇಲಾಖೆಯನ್ನು ಸ್ವಚ್ಛಗೊಳಿಸಲು ಕೇರಳದ ಪೊಲೀಸ್​ ಇಲಾಖೆ ಮುಂದಾಗಿದೆ.

    ಕ್ರಿಮಿನಲ್​ ಹಿನ್ನೆಲೆಯುಳ್ಳ 58ಕ್ಕೂ ಹೆಚ್ಚು ಕ್ರಿಮಿನಲ್​ ಪೊಲೀಸ್​ ಅಧಿಕಾರಿಗಳನ್ನು ಕೆಲಸದಿಂದ ಕಿತ್ತು ಹಾಕಲು ತಯಾರಿ ಮಾಡಿಕೊಂಡಿದೆ. ಮಾಜಿ ಸರ್ಕಲ್​ ಇನ್ಸ್​ಪೆಕ್ಟರ್​ ಸುನು 15 ಬಾರಿ ಇಲಾಖೆಯಿಂದ ಕ್ರಮ ಎದುರಿಸಿದ್ದಾರೆ ಮತ್ತು ಈ ಹಿಂದೆ 6 ಬಾರಿ ಅಮಾನತು ಶಿಕ್ಷೆ ಸಹ ಅನುಭವಿಸಿದ್ದಾರೆ. ಸೇವೆಯಲ್ಲಿ ಇರುವಾಗಲೇ 6 ರೇಪ್​ ಕೇಸ್​ ಸೇರಿದಂತೆ ಅನೇಕ ಕ್ರಿಮಿನಲ್​ ಪ್ರಕರಣಗಳಲ್ಲಿ ಆರೋಪಿಯಾಗಿದ್ದರು. ಕೊಚ್ಚಿಯಲ್ಲಿ ಸಮಾಜ ವಿರೋಧಿಗಳೊಂದಿಗೆ ಸ್ನೇಹ ಬೆಳೆಸಿದ್ದಕ್ಕಾಗಿ ಕಳೆದ ನವೆಂಬರ್ 20 ರಿಂದ ಅಮಾನತುಗೊಂಡಿದ್ದರು. ಇದೀಗ ಡಿಜಿಪಿ ಅನಿಲ್​ ಕಾಂತ್​ ಅವರು ಸುನು ಅವರನ್ನು ಸೇವೆಯಿಂದಲೇ ವಜಾಗೊಳಿಸಿದ್ದಾರೆ.

    ಕೇರಳ ಕೌಮುದಿ ಸುದ್ದಿ ಮಾಧ್ಯಮವು ಪೊಲೀಸ್ ಪಡೆಯಲ್ಲಿರುವ ಕ್ರಿಮಿನಲ್‌ಗಳು ಮತ್ತು ಇಡೀ ಪೊಲೀಸ್​​ ಪಡೆಯ ಪ್ರತಿಷ್ಠೆಗೆ ಮಸಿ ಬಳಿಯುವ ಕ್ರಿಮಿನಲ್​ ಹಿನ್ನೆಲೆಯುಳ್ಳ ಅಧಿಕಾರಿಗಳ ದುಷ್ಕೃತ್ಯಗಳನ್ನು ಎತ್ತಿ ತೋರಿಸುವ ವರದಿ ಮತ್ತು ಸರಣಿಯನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂತಹವರನ್ನು ಕೂಡಲೇ ವಜಾಗೊಳಿಸುವಂತೆ ಡಿಜಿಪಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

    ಪೊಲೀಸ್​ ಸಮವಸ್ತ್ರದಲ್ಲಿ ನಿತ್ಯವೂ ಗಂಭೀರ ಅಪರಾಧ ಎಸಗುವವರನ್ನು ವಜಾಗೊಳಿಸುವ ಸೆಕ್ಷನ್ 86ರ ಅಡಿಯಲ್ಲಿ ಕ್ರಮ ಕೈಗೊಂಡಿರುವುದು ಕೇರಳ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲು ಎಂದು ಡಿಜಿಪಿ ಅನಿಲ್ ಕಾಂತ್ ಹೇಳಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಕಸ್ಟಡಿ ಸಾವು, ವರದಕ್ಷಿಣೆ ಕಿರುಕುಳ ಮುಂತಾದ ಪ್ರಕರಣಗಳಲ್ಲಿ ಆರೋಪಿಗಳು ಮತ್ತು ಶಿಕ್ಷೆಗೊಳಗಾದ ಪೊಲೀಸರನ್ನು ವಜಾಗೊಳಿಸಲಾಗುತ್ತದೆ. ಇವುಗಳು ಜೀವಾವಧಿ ಅಥವಾ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧಗಳಾಗಿವೆ.

    ಅವಿವಾಹಿತ ಪರಿಶಿಷ್ಟ ಪಂಗಡದ ಮಹಿಳೆಯನ್ನು ಹೋಟೆಲ್ ಕೋಣೆಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡುವ ಮೂಲಕ ಪೊಲೀಸ್​ ಇಲಾಖೆಯ ಪ್ರತಿಷ್ಠೆಗೆ ಮಸಿ ಬಳಿದಿದ್ದಕ್ಕಾಗಿ ಸುನು ಅವರ ಎರಡು ವರ್ಷಗಳ ವೇತನ ಹೆಚ್ಚಳವನ್ನು ಈ ಹಿಂದೆ ತಡೆಹಿಡಿಯಲಾಗಿತ್ತು. 2019ರ ಸೆಪ್ಟೆಂಬರ್​ನಲ್ಲಿ ಈ ಘಟನೆ ನಡೆದಿತ್ತು. ಈ ಸಮಯದಲ್ಲಿ ಆರೋಪಿ ಸುನು, ಪೊಲೀಸ್ ಶಾಲೆಯಲ್ಲಿ ಹಿರಿಯ ಕಾನೂನು ಬೋಧಕರಾಗಿದ್ದರು. ಸುನು ಮಾಡಿದ ತಪ್ಪಿಗೆ ಈ ಶಿಕ್ಷೆ ಸಾಕಾಗಲ್ಲ ಎಂದು ಕಂಡುಬಂದ ನಂತರ ಪೊಲೀಸ್ ಕಾಯಿದೆಯಡಿಯಲ್ಲಿ ಅಧಿಕಾರಿಯನ್ನು ಕೆಲಸದಿಂದಲೇ ವಜಾಗೊಳಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply