ಕನ್ನಡ ಕಿರುತೆರೆಯ ‘ಕಾಮಿಡಿ ಕಿಂಗ್’, ಬಿಗ್ ಬಾಸ್ ಕನ್ನಡ ಸೀಸನ್ 8ರ ವಿಜೇತ ಮಂಜು ಪಾವಗಡ ಅವರ ಬದುಕಿನಲ್ಲಿ ಈಗ ಸಂಭ್ರಮ. ಮಂಜು ಪಾವಗಡ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಈ ಸಂಭ್ರಮದ ಸುದ್ದಿಯನ್ನು ಅವರು ಇತ್ತೀಚೆಗೆ ಮಾಧ್ಯಮಗಳ ಮುಂದೆ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

ಮಂಜು ಪಾವಗಡ ಮತ್ತು ನಂದಿನಿ ದಂಪತಿಗೆ 2025ರ ವರ್ಷಾಂತ್ಯದಲ್ಲಿ ಗಂಡು ಮಗು ಜನಿಸಿದೆ. ಸದ್ಯ ಮಗುವಿಗೆ ಈಗ 7 ತಿಂಗಳು ತುಂಬಿದ್ದು, ಮಗನ ಆಗಮನದಿಂದ ಮಂಜು ಅವರ ಮನೆ ತುಂಬಿದಂತಾಗಿದೆ. ಮಗುವಿಗೆ 9 ತಿಂಗಳು ತುಂಬಿದ ಬಳಿಕ ಅದ್ಧೂರಿಯಾಗಿ ನಾಮಕರಣ ಶಾಸ್ತ್ರ ನೆರವೇರಿಸಲು ಕುಟುಂಬಸ್ಥರು ಸಜ್ಜಾಗಿದ್ದಾರೆ. “ಮಗುವಿನ ಆಗಮನದ ನಂತರ ನನ್ನ ಜೀವನ ಇನ್ನಷ್ಟು ರಂಗೇರಿದೆ, ಸದ್ಯ ನನ್ನ ಜೀವನ ಸೂಪರ್ ಆಗಿದೆ” ಎಂದು ಮಂಜು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಮಂಜು ಅವರ ಪತ್ನಿ ನಂದಿನಿ ಅವರು ಮೂಲತಃ ಪಾವಗಡದ ಸಮೀಪದವರೇ ಆಗಿದ್ದು, ಇದು ಹಿರಿಯರು ನಿಶ್ಚಯಿಸಿದ ವಿವಾಹವಾಗಿದೆ. ನಂದಿನಿ ಅವರು ಎಂ.ಕಾಮ್ ಹಾಗೂ ಎಂಬಿಎ ಪದವೀಧರರಾಗಿದ್ದು, ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2024ರ ಅಂತ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸ್ವಂತ ಫ್ಲಾಟ್ ಖರೀದಿಸಿ ಹೊಸ ಮನೆಗೆ ಗೃಹಪ್ರವೇಶ ಮಾಡಿದ್ದರು. ವೈಯಕ್ತಿಕ ಜೀವನದ ಯಶಸ್ಸಿನ ನಡುವೆಯೇ ಮಂಜು ಅವರ ವೃತ್ತಿಜೀವನದಲ್ಲೂ ಹೊಸ ಮೈಲಿಗಲ್ಲು ಸ್ಥಾಪನೆಯಾಗುತ್ತಿದೆ. ನಟ ‘ಡಾಲಿ’ ಧನಂಜಯ್ ನಿರ್ಮಾಣದ ಹಾಗೂ ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಜೆರಾಕ್ಸ್’ (Xerox) ವೆಬ್ ಸರಣಿಯಲ್ಲಿ ಮಂಜು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.