ಮಣಿಪಾಲ ಎಪ್ರಿಲ್ 20: ಈಶ್ವರ ನಗರದಲ್ಲಿರುವ ಕರ್ನಾಟಕ ಹಾಲು ಒಕ್ಕೂಟದ (KMF) ಹಳೆಯ ಹಾಲು ಸಂಸ್ಕರಣಾ ಘಟಕದಲ್ಲಿ ಸೋಮವಾರ ಬೆಳಿಗ್ಗೆ ಬೆಂಕಿ ಅಕಸ್ಮಿಕ ಸಂಭವಿಸಿದೆ. ಘಟಕದಲ್ಲಿ ನಡೆಯುತ್ತಿದ್ದ ವೆಲ್ಡಿಂಗ್ ಕೆಲಸದ ವೇಳೆ ಉಂಟಾದ ಕಿಡಿ ಬೆಂಕಿಗೆ ಕಾರಣವಾಗಿದ್ದು, ಘಟಕಕ್ಕೆ ಅಪಾರ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಸೋಮವಾರ ಬೆಳಿಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ಘಟಕದಲ್ಲಿ ವೆಲ್ಡಿಂಗ್ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಾರಿದ ಬೆಂಕಿಯ ಕಿಡಿಯು ಸಮೀಪದಲ್ಲಿದ್ದ ಆಯಿಲ್ ಮೇಲೆ ಬಿದ್ದಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಬಾಯ್ಲರ್ ವಿಭಾಗಕ್ಕೂ ವ್ಯಾಪಿಸಿದೆ. ದಟ್ಟವಾದ ಹೊಗೆ ಆವರಿಸಿದ್ದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿತ್ತು.
ಮಾಹಿತಿ ತಿಳಿಯುತ್ತಿದ್ದಂತೆಯೇ ಉಡುಪಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸುಮಾರು ಒಂದು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮಯ ಪ್ರಜ್ಞೆಯಿಂದ ಬೆಂಕಿ ಹೆಚ್ಚಿನ ಭಾಗಕ್ಕೆ ಹರಡುವುದು ತಪ್ಪಿದೆಯಾದರೂ, ಯಂತ್ರೋಪಕರಣಗಳಿಗೆ ಭಾರಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.