DAKSHINA KANNADA
ಮಂಗಳೂರು : ಉಳಾಯಿಬೆಟ್ಟು ದರೋಡೆ ಪ್ರಕರಣ, ಮತ್ತೆ ಮೂವರ ಬಂಧನ
ಮಂಗಳೂರು: ಮಂಗಳೂರು ಹೊರವಲಯದ ಉಳಾಯಿಬೆಟ್ಟು ದರೋಡೆ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪಿಡಬ್ಲ್ಯುಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್‌ರ ಮನೆಯಲ್ಲಿ ನಡೆದ ದರೋಡೆ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಕೇರಳದಲ್ಲಿ ಬಂಧಿಸಿದ್ದಾರೆ. ಇದರೊಂದಿಗೆ ಇದುವರೆಗೆ ಬಂಧಿತರಾದವರ ಸಂಖ್ಯೆ 13ಕ್ಕೇರಿದೆ. ಕೇರಳ ತ್ರಿಶೂರ್ ನಿವಾಸಿಗಳಾದ ಡೆವಿನ್, ಗಾಡ್ವಿನ್, ಅಮಲ್ ಕೃಷ್ಣ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಉಪ್ಪಳ ಬಾಲಕೃಷ್ಣ ಶೆಟ್ಟಿ, ಪೆರುವಾಯಿಯ ರೇಮಂಡ್ ಡಿಸೋಜ, ನೀರುಮಾರ್ಗದ ರಮೇಶ್, ವಸಂತ್ ಕುಮಾರ್, ತಿರುವನಂತಪುರದ ಜಾನ್‌ಬಾಸ್ಕೋ, ತ್ರಿಶೂರ್‌ನ ಶಿಜೋ ದೇವಸಿ, ಸತೀಶ್ ಬಾಬು, ಶಾಕೀರ್ ಹುಸೇನ್, ಸಜೀಶ್ ಎಂ., ವಿನೋಜ್ ಪಿ.ಕೆ. ಹಾಗೂ ಕಾರು ಚಾಲಕ ಬಿಪಿನ್‌ರಾಜ್ ಎಂಬವರನ್ನು ಈ ಹಿಂದೆ ಬಂಧಿಸಲಾಗಿತ್ತು. 13 ಮಂದಿ ಆರೋಪಿಗಳ ಪೈಕಿ ಮೂವರು ದ.ಕ. ಜಿಲ್ಲೆಯವರಾಗಿದ್ದರೆ ಉಳಿದ 10 ಮಂದಿ ಕೇರಳದವರು. ಬಂಧಿತ ಆರೋಪಿಗಳಿಂದ ಚಿನ್ನಾಭರಣ, ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೂ ಮೂವರ ಬಂಧನವಾಗಲು ಬಾಕಿಯಿದೆ. ಅವರಿಂದಲೂ ಸೊತ್ತು, ನಗದು ವಶಪಡಿಸಲು ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
You must be logged in to post a comment Login