DAKSHINA KANNADA
ಮಂಗಳೂರು : ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ,ಮಾನವ ಸರಪಳಿಯಲ್ಲಿ ಪಾಲ್ಗೊಂಡ ಸಾವಿರಾರುವಿದ್ಯಾರ್ಥಿಗಳು, ಜನ ಅಧಿಕಾರಿಗಳು..!
ಮಂಗಳೂರು : ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಂಗಳೂರಿನಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಯಿತು. ನಗರದ ಕೆಪಿಟಿ ಬಳಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್ ಜನತೆಗೆ ಸಂವಿಧಾನದ ಪೀಠಿಕೆ ಪ್ರತಿಜ್ಞೆ ಮಾಡಿಸಿದರು.
ವಿವಿಧ, ಸಾಂಪ್ರದಾಯಿಕ, ಜನಪದ, ಹುಲಿ ಕುಣಿತ ಕಲಾತಂಡಗಳು ಸಮಾರಂಭಕ್ಕೆ ಮೆರುಗು ನೀಡಿದರು. ಹೆಜಮಾಡಿ ಟೋಲ್ಗೇಟ್ ನಿಂದ ಸುಳ್ಯದ ಸಂಪಾಜೆವರೆಗೆ ನಿರ್ಮಾಣಗೊಂಡ ಮಾನವ ಸರಪಳಿಯಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು, ಅಧಿಕಾರಿವರ್ಗ, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ನಂತೂರು,ಪಡೀಲ್ ಬಿಸಿರೋಡ್,ಮಾಣಿ,ಪುತ್ತೂರು ಮಾರ್ಗವಾಗಿ ಸುಳ್ಯದ ಸಂಪಾಜೆ ತನಕ ಮಾನವ ಸರಪಳಿ ನಿರ್ಮಿಸಲಾಗಿತ್ತು. ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದ ದಕ್ಷಿಣಕನ್ನಡ ಸಂಸದ ಬ್ರಜೇಶ್ ಚೌಟ ಭಾರತ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಸ್ವಾತಂತ್ರೋತ್ತರದ 75 ವರ್ಷಗಳಲ್ಲಿ ನಮ್ಮ ಮೇಲೆ ವಿಶ್ವದ ಸಂಶಯದ ಕಣ್ಣುಗಳಿತ್ತು. ಆದರೆ ವಿಶ್ವಕ್ಕೆ ಮಾದರಿ ರೂಪದಲ್ಲಿ ಪ್ರಜಾಪ್ರಭುತ್ವ ಉಳಿಸುವ ಕಾರ್ಯ ಮಾಡಿದ್ದಾರೆ.
ಹಲವು ರೀತಿಯ ಬದಲಾವಣೆಗಳ ಜೊತೆ ಭಾರತ ಇಂದು ವಿಶ್ವದ ಐದನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಮೂಡಿಬಂದಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಕಾರ ದೇಶ ಮುಂದಿನ 25 ವರ್ಷ ಭಾರತದ ಅಮೃತ ಕಾಲವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಮಂಗಳೂರು ಮೇಯರ್, ಪಶ್ಚಿಮ ವಲಯ ಐಜಿಪಿ, ಮಂಗಳೂರು ನಗರ ಪೊಲೀಸ್ ಆಯುಕ್ತರ ಜೊತೆಗೆ ಹಿರಿಯ, ಕಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಕೈಜೋಡಿಸಿದ್ದರು.
You must be logged in to post a comment Login