DAKSHINA KANNADA
ಮಂಗಳೂರು : ಗುಜರಾತ್ ಪೊಲೀಸರ ಮಹತ್ವದ ಕಾರ್ಯಾಚರಣೆ, ಮುಲ್ಕಿ ರೈಲು ಪ್ರಯಾಣಿಕ ಮೌಜಾಮ್ ಹತ್ಯೆ ಸೇರಿದಂತೆ ಸಿರಿಯಲ್ ಕಿಲ್ಲರ್ ರೇಪಿಸ್ಟ್ ‘ರಾಹುಲ್ ಜಾಟ್’ ಬಂಧನ..!
ಮಂಗಳೂರು : ಮೂಲ್ಕಿ ಸಮೀಪ ರೈಲು ಪ್ರಯಾಣಿಕ ಮೌಜಾಮ್ ಹತ್ಯೆ ಮಾಡಿದ ಆರೋಪಿಯನ್ನು ಗುಜರಾತ್ ಪೊಲೀಸರು ವಾಪಿ ರೈಲು ನಿಲ್ದಾಣದ ಸಮೀಪ ಭಾನುವಾರ ರಾತ್ರಿ ಬಂಧಿಸಿದ್ದಾರೆ. 19 ವರ್ಷದ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ.
ಹರ್ಯಾಣದ ರೋಹಟಕ್‌ನ ರಾಹುಲ್ ಜಾಟ್ ಸೆರೆಯಾಗಿರುವ ಆರೋಪಿಯಾಗಿದ್ದು ಪ್ರಾರ್ಥಮಿಕ ತನಿಖೆಯ ಪ್ರಕಾರ ಈತ ಸೀರಿಯಲ್ ಕಿಲ್ಲರ್ ಮತ್ತು ಅತ್ಯಾಚಾರಿಯಾಗಿದ್ದು ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ ಎನ್ನಲಾಗಿದೆ. ವಲ್ಸಾಡ್ ಜಿಲ್ಲೆಯ ಉದ್ವಾಡ ಎಂಬಲ್ಲಿ 19 ವರ್ಷದ ಯುವತಿಯನ್ನು ಸಾಯಿಸಿದ ಪ್ರಕರಣದಲ್ಲಿ ಈತನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದರು. ಯುವತಿಯ ಶವ ಉದ್ವಾಡ ರೈಲು ನಿಲ್ದಾಣದ ಸಮೀಪವಿರುವ ಹಳಿಯ ಮೇಲೆ ನವೆಂಬರ್ 14ರಂದು ಪತ್ತೆಯಾಗಿತ್ತು. ಆಕೆ ಟ್ಯೂಷನ್ನಿಂದ ಮನೆಗೆ ಹಿಂದಿರುತ್ತಿದ್ದಾಗ ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿ ಶವವನ್ನು ಎಸೆದು ಹೋಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಲ್ಸಾಡ್‌ನ ವಾಪಿ ರೈಲ್ವೇ ನಿಲ್ದಾಣದ ಪಾರ್ಕಿಂಗ್ ಪ್ರದೇಶದಿಂದ ಸ್ಥಳೀಯ ಮತ್ತು ರೈಲ್ವೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಾಹುಲ್ ಜಾಟ್‌ನನ್ನು ಬಂಧಿಸಲಾಗಿದೆ. ಜಾಟ್ ಪದೇಪದೆ ತಾನಿರುವ ಸ್ಥಳವನ್ನು ಬದಲಾಯಿಸುತ್ತಿದ್ದ. ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ರೈಲುಗಳು ಮತ್ತು ರೈಲು ನಿಲ್ದಾಣಗಳಲ್ಲಿ ಲೂಟಿ ಮತ್ತು ಕೊಲೆ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ. ಈತ ಹೆಚ್ಚಾಗಿ ರೈಲು ಪ್ರಯಾಣಿಕರನ್ನು ಗುರಿಮಾಡಿಕೊಂಡು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ.
ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಸೋಲಾಪುರ ರೈಲು ನಿಲ್ದಾಣದ ಬಳಿ ರೈಲಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಹೌರಾ ರೈಲು ನಿಲ್ದಾಣದ ಬಳಿ ಕತಿಹಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ವೃದ್ಧರೊಬ್ಬರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಮೂಲ್ಕಿಯಲ್ಲಿ ರೈಲು ಪ್ರಯಾಣಿಕನನ್ನು ಹತ್ಯೆ ಮಾಡಿದ್ದ ವಿಚಾರವನ್ನು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 14 ರಂದು, ಆರೋಪಿ ಉಡ್ವಾಡಕ್ಕೆ ತನ್ನ ಹಳೆಯ ಕೆಲಸದ ಸ್ಥಳವಾದ ಹೋಟೆಲಿನಿಂದ ಹಣ ಪಡೆಯಲು ಬಂದಿದ್ದ. ವಾಪಿಗೆ ಹೋಗಲು ಟ್ರೈನ್‌ಗಾಗಿ ಕಾಯುತ್ತಿರುವಾಗ, ರೈಲು ನಿಲ್ದಾಣದಲ್ಲಿ ಒಂಟಿಯಾಗಿ ನಡೆಯುತ್ತಿದ್ದ ಹುಡುಗಿಯನ್ನು ಗಮನಿಸಿದ್ದಾನೆ. ಅವಳನ್ನು ಹಿಂಬಾಲಿಸಿ ಮಾವಿನ ತೋಟಕ್ಕೆ ಎಳೆದೊಯ್ದಿದ್ದಾನೆ. ಅಲ್ಲಿ ಅವಳ ಮೇಲೆ ಅತ್ಯಾಚಾರವೆಸಗಿ, ನಂತರ ಕುತ್ತಿಗೆಗೆ ಸುತ್ತಿ ಕೊಲೆ ಮಾಡಿ ಬಳಿಕ ವಾಪಿಗೆ ಹಿಂದಿರುಗಿದ್ದಾನೆ.
ಮುಂಬೈ ಪೊಲೀಸರಿಗೆ ಸಿಕ್ಕ ಮಾಹಿತಿಯ ಮೇಲೆ, ಬಂದ್ರಾ-ಭುಜ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಯ ಮೇಲೆ ನಿಗಾ ಇಡಲಾಗಿತ್ತು. ವಾಪಿ ರೈಲು ನಿಲ್ದಾಣದಲ್ಲಿ ಪೊಲೀಸರು ಅವನನ್ನು ಬಂಧಿಸಿದರು.
ನವೆಂಬರ್ 19 ರಂದು ಪಶ್ಚಿಮ ಬಂಗಾಳದ ಕಟಿಹಾರ್ ಎಕ್ಸ್‌ಪ್ರೆಸ್‌ನಲ್ಲಿ ವೃದ್ಧ ಸಂಗೀತ ಶಿಕ್ಷಕರನ್ನು ಕೊಂದು ಸೊತ್ತುಗಳನ್ನು ಕಳವು ಮಾಡಿದ್ದಾನೆ. ಅದಕ್ಕೂ ಮುನ್ನ ಅಕ್ಟೋಬರ್ 25 ರಂದು ಬೆಂಗಳೂರಿನಿಂದ ಮುರ್ದೇಶ್ವರಕ್ಕೆ ಹೋಗುತ್ತಿದ್ದ ರೈಲಿನಲ್ಲಿ ಒಬ್ಬ ವ್ಯಕ್ತಿಯನ್ನು ಕೊಂದು ಸೊತ್ತುಗಳನ್ನು ಕಳವು ಮಾಡಿದ್ದಾನೆ. ಅಕ್ಟೋಬರ್‌ನಲ್ಲಿ ಪುಣೆ-ಕನ್ಯಾಕುಮಾರಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಮಹಾರಾಷ್ಟ್ರದ ಸೊಲಾಪುರ ರೈಲು ನಿಲ್ದಾಣದ ಬಳಿ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ” ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಮೇ 2024 ರಲ್ಲಿ ರಾಜಸ್ಥಾನದ ಜೋಧ್‌ಪುರ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅವನ ವಿರುದ್ಧ 13 ಪ್ರಕರಣಗಳು ದಾಖಲಾಗಿವೆ. ಅವನು ಶಸ್ತ್ರಾಸ್ತ್ರ ಸಾಗಾಣಿಕೆಯಲ್ಲೂ ಭಾಗಿಯಾಗಿದ್ದ. ಈತನನ್ನು ಖೆಡ್ಡಾಕ್ಕೆ ಕೆಡವಲು ಪೊಲೀಸರು 5,000 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಸಾವಿರಾರು ಜನರನ್ನು ವಿಚಾರಣೆ ಮಾಡಿದ ನಂತರ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ತೆರಳುತ್ತಿದ್ದ ರೈಲಿನಲ್ಲಿದ್ದ ಚಿಕ್ಕಬಳ್ಳಾಪುರದ ಕುಮಾರಪೇಟೆ ನಿವಾಸಿ ಅಮೀರ್ ಖಾನ್ ಎಂಬುವರ ಪುತ್ರ ಮೌಜಾಮ್(35) ಅಕ್ಟೋಬರ್ 25 ರಂದು ಕೊಲೆಯಾಗಿದ್ದ. ಕೊಲೆಯಾದ ಮೌಜಾಮ್ ಸೇಲ್ಸ್ ರೆಪ್ ಕೆಲಸ ಮಾಡುತ್ತಿದ್ದು, ಈತ ಬೆಂಗಳೂರಿನಿಂದ ಮುರ್ಡೇಶ್ವರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವನ ಕುತ್ತಿಗೆ ಬಿಗಿದ್ದು ಸಾಯಿಸಿ ಅವರ ಕೈಯಲ್ಲಿದ್ದ ಹಣದ ಬ್ಯಾಗ್ ಮತ್ತು ಮೊಬೈಲ್ ಸುಲಿಗೆ ಮಾಡಿ ಆರೋಪಿ ಪರಾರಿಯಾಗಿದ್ದ.