ಮಂಗಳೂರು ಜೂನ್ 29: ನಗರದಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ತಡರಾತ್ರಿ ಬೆಂದೂರಿನ ಖಾಸಗಿ ಶಾಲೆಯೊಂದರ ಮುಂಭಾಗ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಘಟನೆ ನಡುರಾತ್ರಿ ನಡೆದಿರುವುದರಿಂದ ಯಾವುದೇ ಪ್ರಾಣಾಪಾಯ ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸದೆ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಸೋಮವಾರ ಬೆಳಗ್ಗಿನ ಜಾವ ಸುಮಾರು ಎರಡು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ನಿನ್ನೆ ದಿನವಿಡೀ ಸುರಿದ ಧಾರಾಕಾರ ಮಳೆಗೆ ಮಣ್ಣು ಸಡಿಲಗೊಂಡು ಈ ಬೃಹತ್ ಮರ ಬೇರುಸಹಿತ ಶಾಲೆಯ ಮುಂಭಾಗದ ರಸ್ತೆಗೆ ಉರುಳಿದೆ.

ಮುಂಜಾನೆ ಶಾಲೆ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವ ಮುನ್ನವೇ ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಕತ್ತಲನ್ನೂ ಲೆಕ್ಕಿಸದೆ ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ಆಧುನಿಕ ಯಂತ್ರಗಳ ಮೂಲಕ ಮರವನ್ನು ಕತ್ತರಿಸಿ ರಸ್ತೆಯಿಂದ ತೆರವುಗೊಳಿಸಿದ್ದಾರೆ. ಮುಂಜಾನೆ ವೇಳೆಗೆ ರಸ್ತೆಯನ್ನು ಸಂಪೂರ್ಣವಾಗಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕರಾವಳಿಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಜುಲೈ 1 ಮತ್ತು 2 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.