#ಮತ್ತೊಮ್ಮೆಮೋದಿಗಾಗಿ ಆಸ್ಟ್ರೇಲಿಯಾದ ಕೆಲಸ ಬಿಟ್ಟ ಮೋದಿ ಅಭಿಮಾನಿ

ಮಂಗಳೂರು ಎಪ್ರಿಲ್ 15: ಪ್ರಧಾನಿ ನರೇಂದ್ರ ಮೋದಿಗೋಸ್ಕರವಾಗಿ ಆಸ್ಟ್ರೇಲಿಯಾದಲ್ಲಿದ್ದ ದೊಡ್ಡ ಹುದ್ದೆಯನ್ನು ಬಿಟ್ಟು ಮತದಾನ ಮಾಡಲು ಮಂಗಳೂರಿಗೆ ಯುವಕನೊಬ್ಬ ಆಗಮಿಸಿದ್ದಾನೆ. ಮೂಲತ ಮಂಗಳೂರಿನವರಾಗಿರುವ ಈ ಯುವಕ ಮೋದಿಯ ಮೇಲಿನ ಅಭಿಮಾನದಿಂದಾಗಿ ಕೆಲಸ ಬಿಟ್ಟು ಮಂಗಳೂರಿಗೆ ಆಗಮಿಸಿದ್ದಾನೆ.

ಮೂಲತಃ ಮಂಗಳೂರಿನ ಸುರತ್ಕಲ್ ನಿವಾಸಿಯಾಗಿರುವ ಸುಧೀಂದ್ರ ಹೆಬ್ಬಾರ್, ಸಿಡ್ನಿ ಏರ್ಪೋರ್ಟ್ ಕಚೇರಿಯಲ್ಲಿ ಸ್ಕ್ರೀನಿಂಗ್ ಆಫೀಸರ್ ಆಗಿದ್ದರು. ನರೇಂದ್ರ ಮೋದಿಯಾದ ಪ್ರಧಾನಿಯಾದ ನಂತರ ಭಾರತೀಯರ ಬಗ್ಗೆ ಆಸ್ಟ್ರೇಲಿಯಾದಲ್ಲಿ ಗೌರವ ಹೆಚ್ಚಿದ್ದರಿಂದ ಸುಧೀಂದ್ರ ಹೆಬ್ಬಾರ್ ಮೋದಿ ಅವರ ಅಭಿಮಾನಿಯಾಗಿ ಬದಲಾಗಿದ್ದರು.

ಅಲ್ಲದೆ ಈ ಬಾರಿ ಮತ್ತೆ ಮೋದಿ ಪ್ರಧಾನಿಯಾಗಬೇಕೆಂದು ಊರಿಗೆ ಬಂದು ಏಪ್ರಿಲ್ 18 ರಂದು ತನ್ನ ಮತದ ಹಕ್ಕು ಚಲಾಯಿಸಲು ಮುಂದಾಗಿದ್ದಾರೆ. ಆದರೆ, ಮತದಾನ ದಿವಸ ಊರಿಗೆ ಬರಲು ರಜೆ ಸಿಗದ ಕಾರಣ ಎಪ್ರಿಲ್ 18ರಂದು ಓಟ್ ಹಾಕಲೇಬೇಕೆಂಬ ಹಠದಿಂದಾಗಿ ಸುಧೀಂದ್ರ ತನ್ನ ಹುದ್ದೆಗೇ ರಾಜಿನಾಮೆ ನೀಡಿದ್ದಾರೆ.

ಬೇಸಗೆಯ ಕಾರಣದಿಂದ ಎಪ್ರಿಲ್ 5 ರಿಂದ 12ರ ವರೆಗೆ ಮಾತ್ರ ಸುದೀಂದ್ರ ಅವರಿಗೆ ರಜೆ ಮಂಜೂರಾಗಿತ್ತು. ದೇಶಕ್ಕಾಗಿ ಗಡಿ ಕಾಯುವ ಕೆಲಸವಂತೂ ಮಾಡಲಾಗಲ್ಲ. ಕನಿಷ್ಠ ಮೋದಿಗಾಗಿ ತಮ್ಮ ಹಕ್ಕು ಚಲಾಯಿಸಲೇಬೇಕೆಂದು ಸುಧೀಂದ್ರ ಹೆಬ್ಬಾರ್ ಕೆಲಸಕ್ಕೆ ರಾಜಿನಾಮೆ ಬಿಸಾಕಿ, ಊರಿಗೆ ಮರಳಿದ್ದಾರೆ.

ಸುಧೀಂದ್ರ, ಆಸ್ಟ್ರೇಲಿಯಾದ ಫಿಜಿ ಇಂಡಿಯನ್ ಮಹಿಳೆಯನ್ನು ಮದುವೆಯಾಗಿದ್ದು ಒಬ್ಬ ಪುತ್ರನನ್ನು ಹೊಂದಿದ್ದಾರೆ. ನಾಲ್ಕು ವರ್ಷಗಳಿಂದ ಆಸ್ಟ್ರೇಲಿಯಾದ ನಾಗರಿಕತ್ವವನ್ನೂ ಪಡೆದಿದ್ದು ಜೊತೆಗೆ, ಭಾರತೀಯ ಪ್ರಜೆಯ ಸ್ಥಾನವನ್ನೂ ಉಳಿಸಿಕೊಂಡಿದ್ದರು. ಎಂಬಿಎ ಪದವೀಧರನಾಗಿರುವ ಸುಧೀಂದ್ರ ಕಳೆದ ಬಾರಿ 2014 ರ ಚುನಾವಣೆ ವೇಳೆ ಮತದಾನ ಮಾಡಿಯೇ ಆಸ್ಟ್ರೇಲಿಯಾಕ್ಕೆ ತೆರಳಿದ್ದರು.

ಈ ಬಾರಿ ಚುನಾವಣೆ ಫಲಿತಾಂಶದ ವರೆಗೂ ಭಾರತದಲ್ಲೇ ಇದ್ದು ವಿಜಯೋತ್ಸವ ಆಚರಿಸಿಯೇ ಹಿಂತಿರುಗುವುದಾಗಿ ಹೇಳಿದ್ದಾರೆ.
ಮೋದಿಗಾಗಿ ಕೆಲಸ ತ್ಯಜಿಸಿದ್ದು ದೊಡ್ಡ ವಿಷ್ಯಾನೇ ಅಲ್ಲ. ಪ್ರಯತ್ನಿಸಿದರೆ ಬೇರೊಂದು ಕೆಲಸವೂ ಸಿಗುತ್ತೆ ಅನ್ನುವ ದೇಶಾಭಿಮಾನ ಅಪರೂಪದ್ದು.