DAKSHINA KANNADA
ಲೋಕಸಭಾ ಚುನಾವಣೆಯಲ್ಲಿ ನಾನು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಸತ್ಯಜಿತ್ ಸುರತ್ಕಲ್ ಸ್ಪಷ್ಟನೆ
ಲೋಕಸಭಾ ಚುನಾವಣೆಯಲ್ಲಿ ನಾನು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಸತ್ಯಜಿತ್ ಸುರತ್ಕಲ್ ಸ್ಪಷ್ಟನೆ
ಪುತ್ತೂರು ಮಾರ್ಚ್ 14: ಕಳೆದ ಮೂವತ್ತೈದು ವರ್ಷಗಳಿಂದ ಬಿಜೆಪಿ ಪಕ್ಷ ಹಾಗೂ ಸಂಘಟನೆಗಳಲ್ಲಿ ದುಡಿಯುತ್ತಿದ್ದು, ಈ ಬಾರಿ ಪಕ್ಷ ತನಗೆ ಲೋಕಸಭಾ ಅಭ್ಯರ್ಥಿ ಸ್ಥಾನಕ್ಕೆ ಅವಕಾಶ ನೀಡಬೇಕೆಂದು ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಒತ್ತಾಯಿಸಿದ್ದಾರೆ.
ತುಳುನಾಡಿನ ವೀರಪುರುಷರಾದ ಕೋಟಿ-ಚೆನ್ನಯರ ಮೂಲ ಸ್ಥಳ ಗೆಜ್ಜೆಗಿರಿ ನಂದನ ಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರು ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಸಾವಿರಾರು ಕಾರ್ಯಕರ್ತರ ಪರಿಶ್ರಮದ ಮೂಲಕ ಬೆಳೆದು ಬಂದ ಪಕ್ಷವಾಗಿದೆ. ಆ ಎಲ್ಲಾ ಕಾರ್ಯಕರ್ತರ ಆಶಯ ಈ ಬಾರಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿ ಬದಲಾವಣೆಯಾಗಬೇಕು ಎನ್ನುವುದಾಗಿದ್ದು, ಈಗಾಗಲೇ ಎರಡು ಬಾರಿ ಅಭ್ಯರ್ಥಿಯಾಗಿರುವ ಹಾಲಿ ಸಂಸದರಲ್ಲಿ ಬದಲಾವಣೆ ಮಾಡಿ ತನಗೆ ಅವಕಾಶ ನೀಡಬೇಕೆಂದು ಈಗಾಗಲೇ ಒತ್ತಾಯ ಮಾಡಲಾಗಿದೆ ಎಂದರು.
ತನ್ನ ಹೋರಾಟ ಯಾರ ವಿರುದ್ಧವೂ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು ಕಳೆದ ಮೂವತ್ತೈದು ವರ್ಷಗಳಿಂದ ಬಿಜೆಪಿಗಾಗಿ ಹಾಗೂ ಹಿಂದೂ ಸಂಘಟನೆಗಳಲ್ಲಿ ದುಡಿದ ತನಗೆ ಈ ಬಾರಿ ಲೋಕಸಭಾ ಅಭ್ಯರ್ಥಿ ಸ್ಥಾನದ ಟಿಕೆಟ್ ನೀಡಬೇಕೆನ್ನುವುದು ಒತ್ತಾಯವಾಗಿದ್ದು, ದೇವರ ಅನುಗ್ರಹದಿಂದ ಆ ಅವಕಾಶ ಒದಗಿ ಬರುವುದು ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಹಿಂದಿನ ವಿಧಾನಸಭಾ ಚುನಾವಣೆಗೂ ಈ ಬಾರಿಯ ಲೋಕಸಭಾ ಚುನಾವಣೆಗೂ ವೆತ್ಯಾಸವಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಕಳೆದ ಬಾರಿ ರಾಜ್ಯದಲ್ಲಿ ನಡೆದ ವಿಧಾನ ಸಭೆ ಚುನಾವಣೆಯ ಸಂದರ್ಭದಲ್ಲೂ ಸತ್ಯಜಿತ್ ಸುರತ್ಕಲ್ ಮಂಗಳೂರು ಉತ್ತರ ವಿಧಾನಸಬಾ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಭರತ್ ಶೆಟ್ಟಿಯವರಿಗೆ ಟಿಕೆಟ್ ನೀಡಿರುವುದು ಅವರ ಅಸಮಾಧಾನಕ್ಕೂ ಕಾರಣವಾಗಿತ್ತು.
ಸತ್ಯಜಿತ್ ಸುರತ್ಕಲ್ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಅತ್ಯಂತ ಪ್ರಭಾವಿ ಬಿಲ್ಲವ ಸಮುದಾಯದ ಮುಖಂಡರೂ ಆಗಿರುವ ಕಾರಣ ಬಿಲ್ಲವರ ಆರಾಧ್ಯ ಪುರುಷರಾದ ಕೋಟಿ-ಚೆನ್ನಯರ ಮೂಲ ಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿರುವುದು ಹಲವು ಕುತೂಹಲಕ್ಕೂ ಕಾರಣವಾಗಿದೆ.