ಮಂಗಳೂರು ಜುಲೈ 02: ಕಂಕನಾಡಿ ನಾಗುರಿ ಬಳಿ ಸಂಭವಿಸಿದ ಕಂಪೌಂಡ್ ವಾಲ್ ಕುಸಿತದಿಂದ ದುರಂತದಲ್ಲಿ ದಾರುಣವಾಗಿ ಮೃತಪಟ್ಟ ಇಬ್ಬರು ಪುಟ್ಟ ಕಂದಮ್ಮಗಳ ಅಂತ್ಯಸಂಸ್ಕಾರವು ಕಣ್ಣೀರಿನ ಸಾಗರದ ಮಧ್ಯೆ ಜರುಗಿತು. ಕಣ್ಣೆದುರೇ ಆಟವಾಡಿಕೊಂಡಿದ್ದ ಮಕ್ಕಳ ಜೀವವಿಲ್ಲದ ಮೃತದೇಹಗಳನ್ನು ಕಂಡು ಇಡೀ ನಾಗುರಿ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿತ್ತು.

ದುರಂತದಲ್ಲಿ ಸಾವನ್ನಪ್ಪಿದ 8 ವರ್ಷದ ಬಾಲಕ ಅನಾಮಿಕ ಚೌರಾಸಿಯ ಹಾಗೂ 4 ವರ್ಷದ ಬಾಲಕಿ ಪರಿ (ತನು) ಅವರ ಅಂತ್ಯಸಂಸ್ಕಾರವನ್ನು ನಂದಿಗುಡ್ಡೆ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಅಂತ್ಯಸಂಸ್ಕಾರಕ್ಕೂ ಮುನ್ನ ಮೃತ ಮಕ್ಕಳ ಪಾರ್ಥಿವ ಶರೀರವನ್ನು ನಾಗುರಿ ಬಳಿಯ ಮನೆಗೆ ತರಲಾಗಿದ್ದು, ಸಾರ್ವಜನಿಕ ಹಾಗೂ ಸ್ಥಳೀಯರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕಣ್ಣೆದುರೇ ಮೊನ್ನೆ ಮೊನ್ನೆಯಷ್ಟೇ ಓಡಾಡಿಕೊಂಡಿದ್ದ ಮಕ್ಕಳ ಮೃತದೇಹಗಳನ್ನು ನೋಡಿದ ಸ್ಥಳೀಯರು ಬಿಕ್ಕಿ ಬಿಕ್ಕಿ ಅತ್ತರು. ಇಡೀ ವಾತಾವರಣದಲ್ಲಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತ ಮಕ್ಕಳ ಮನೆ ಸಮೀಪದಲ್ಲೇ ಇದ್ದ ಕಂಕನಾಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು. ಕಠಿಣ ಕರ್ತವ್ಯದ ನಡುವೆಯೂ ಪುಟ್ಟ ಮಕ್ಕಳ ದಾರುಣ ಅಂತ್ಯಕ್ಕೆ ಕರಗಿದ ಪೊಲೀಸರು, ಕಣ್ಣೀರು ಸುರಿಸುತ್ತಲೇ ಮಕ್ಕಳಿಗೆ ಭಾವುಕ ನಮನ ಸಲ್ಲಿಸಿದರು. ಸ್ಥಳೀಯರು ಹಾಗೂ ಪೊಲೀಸರ ಸಮ್ಮುಖದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ನಂದಿಗುಡ್ಡೆಯ ಚಿತಾಗಾರದಲ್ಲಿ ಕಂದಮ್ಮಗಳ ಅಂತ್ಯಕ್ರಿಯೆ ನೆರವೇರಿತು.