DAKSHINA KANNADA
ಮಂಗಳೂರು : ಪೊಲೀಸರ ನಿರ್ಬಂಧದ ಹೊರತಾಗಿಯೂ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ನಡೆದ ಸಾಮೂಹಿಕ ಧರಣಿ ಯಶಸ್ವಿ
ಮಂಗಳೂರು : ಮಂಗಳೂರಿನ ನಂತೂರು – ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಕೂಳೂರು ಸೇತುವೆ ಬಳಿ ಹಮ್ಮಿಕೊಂಡಿದ್ದ ಸಾಮೂಹಿಕ ಧರಣಿ ಪೊಲೀಸರ ಬೆದರಿಕೆಯ ಹೊರತಾಗಿಯೂ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಹೋರಾಟ ಸಮಿತಿ ಹೇಳಿದೆ.
ಮಾರಣಾಂತಿಕ ಹೆದ್ದಾರಿ ಗುಂಡಿಗಳು, ವರ್ಷಗಳಿಂದ ಕುಂಟುತ್ತಿರುವ ಕೂಳೂರು ಹೊಸ ಸೇತುವೆ, ನಂತೂರು ಮೇಲ್ಸೇತುವೆಗಳ ಕಾಮಗಾರಿ, ಪೂರ್ಣಪ್ರಮಾಣದ ದುರಸ್ತಿ ಇಲ್ಲದೆ ಅವ್ಯವಸ್ಥೆಯ ಆಗರವಾಗಿರುವ ಹೆದ್ಧಾರಿ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಬೇಕು ಎಂಬ ಬೇಡಿಕೆ ಇಟ್ಟುಕೊಂಡು ಹಮ್ಮಿಕೊಳ್ಳಲಾದ ಶಾಂತಿಯುತ ಸಾಮೂಹಿಕ ಧರಣಿಗೆ ಮಂಗಳೂರು ಪೊಲೀಸ್ ಕಮೀಷನರ್ ಕೊನೆಯ ಕ್ಷಣದಲ್ಲಿ ಏಕಾ ಏಕಿ ಅನುಮತಿ ನಿರಾಕರಿಸಿದರು. ಈ ಅನುಮತಿ ನಿರಾಕರಣೆಯ ಹಿಂದೆ ಬಿಜೆಪಿ ಶಾಸಕರುಗಳ ಕುಮ್ಮಕ್ಕು ಇತ್ತು ಎಂಬುದು, ಪೊಲೀಸ್ ಕಮೀಷನರ್ ಬಿಜೆಪಿ ಶಾಸಕರುಗಳ ಇಶಾರೆಯಂತೆ ನಡೆದುಕೊಳ್ಳುವುದು ತಿಳಿದಿದ್ದ ಎಲ್ಲರಿಗೂ ಅರಿವಾಗಿತ್ತು.
ಧ್ವನಿ ವರ್ಧಕ ಬಳಸಲು, ಶಾಮಿಯಾನ ಹಾಕಲೂ ಪೊಲೀಸ್ ಕಮೀಷನರ್ ಅನುಮತಿ ನೀಡಲಿಲ್ಲ. ಧರಣಿ ಕುಳಿತರೂ ಕಠಿಣ ಕ್ರಮದ ಬೆದರಿಕೆಯನ್ನು ಪೊಲೀಸ್ ಕಮೀಷನರ್ ಕಡೆಯಿಂದ ನೀಡಲಾಗಿತ್ತು. ಆದರೆ, ಪೊಲೀಸ್ ನಿರ್ಬಂಧದ ಹೊರತಾಗಿಯೂ ಸಾಮೂಹಿಕ ಧರಣಿ ನಡೆಯಲಿದೆ, ಬಂಧನಕ್ಕೂ ಸಿದ್ದರಾಗಿ ಬರುವಂತೆ ಹೋರಾಟ ಸಮಿತಿಯು ಸಹಭಾಗಿ ಸಂಘಟನೆಗಳಲ್ಲಿ ಮನವಿ ಮಾಡಿತ್ತು.
ಹೋರಾಟ ಸಮಿತಿಯ ಕರೆಗೆ ಓಗೊಟ್ಟು, ಬಿಜೆಪಿ ಶಾಸಕರುಗಳ ಆಜ್ಞಾನುಧಾರಕ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಬೆದರಿಕೆಯನ್ನು ಮೀರಿ ದೊಡ್ಡ ಸಂಖ್ಯೆಯ ಜನರು, ವಿವಿಧ ಸಂಘಟನೆಗಳ ಪ್ರಮುಖರು ಹತ್ತು ಗಂಟೆಗೆ ಮೊದಲೇ ಸ್ಥಳದಲ್ಲಿ ಜಮಾಯಿಸಿ ಹೋರಾಟಕ್ಕೆ ಸ್ಪೂರ್ತಿ ತುಂಬಿದರು. ಶಾಮಿಯಾನ ಹಾಕಲು ಅವಕಾಶ ನೀಡದಿದ್ದರೂ ಸುಡುವ ಬಿಸಿಲಿನಲ್ಲಿಯೇ ರಸ್ತೆ ಬದಿ ಕುಳಿದು ಧರಣಿ ಆರಂಭಿಸಿದರು, ಧ್ವನಿ ವರ್ಧಕ ಇಲ್ಲದಿದ್ದರೂ ಸಂಸದ, ಶಾಸಕರ ಕಿವಿಗೆ ತಲುಪುವಷ್ಟು ಜೋರಾಗಿ ಘೋಷಣೆಗಳು ಮೊಳಗಿದವು, ಭಾಷಣಗಳು ಜರುಗಿದವು. ಸುಡು ಬಿಸಿಲಿದ್ದರೂ 10: 00 ಗಂಟೆಗೆ ಆರಂಭವಾದ ಧರಣಿ ಸುಮಾರು 12 :15 ರವರೆಗೂ ದೊಡ್ಡ ಸಂಖ್ಯೆಯ ಪೊಲೀಸರು ಸುತ್ತುವರಿದಿರುವುದರ ಹೊರತಾಗಿಯೂ ಮುಂದುವರಿಯಿತು. ಪೊಲೀಸರು ಬಂಧಿಸುವದಾದರೆ ಸಿದ್ದರಿರುವುದಾಗಿ ಪ್ರಕಟಿಸಲಾಯಿತು. ಧರಣಿಯ ಎದುರಾಗಿ FIR ಹಾಕಿದರೆ ಕಮೀಷನರ್ ವಿರುದ್ಧ ಪ್ರತಿಭಟನೆ ನಡೆಸುವಾದಾಗಿ, ಬಂಧಿಸಲು ಆಗ್ರಹಿಸುವುದಾಗಿ ತೀರ್ಮಾನಿಸಲಾಯಿತು.
ಸಾಮೂಹಿಕ ಧರಣಿಯಲ್ಲಿ ಸಿಪಿಎಂ, ಕಾಂಗ್ರೆಸ್ ಪಕ್ಷದ ಮುಖಂಡರು, ದಲಿತ, ಕಾರ್ಮಿಕ, ಯುವಜನ, ಮಹಿಳಾ ಸಂಘಟನೆಗಳು ಸೇರಿದಂತೆ ಹಲವು ಸಾಮಾಜಿಕ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಭಾಗಿಗಳಾದರು, ಹೆದ್ದಾರಿ ಸಮಸ್ಯೆಗಳಿಂದ ಆಕ್ರೋಶಿರಾಗಿರುವ ಸಾರ್ವಜನಿಕರೂ ಹೊಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಪೊಲೀಸ್ ಬೆದರಿಕೆಯ ನಡುವೆಯೂ ನಮ್ಮ ನಿರೀಕ್ಷೆ ಮೀರಿ ಜನರು ಸಾಮೂಹಿಕ ಧರಣಿಯಲ್ಲಿ ಪಾಲ್ಗೊಂಡರು. ದಕ್ಷಿಣ ಕನ್ನಡ ಜಿಲ್ಲೆ ಅಲ್ಲದೆ ಉಡುಪಿಯಿಂದಲೂ ಹಲವು ಪ್ರಮುಖರು ಭಾಗವಹಿಸಿದ್ದರು.
ಹೋರಾಟ ತೀವ್ರಗೊಳಿಸಲು ಮತ್ತು ಪಾದಯಾತ್ರೆ ನಡೆಸಲು ನಿರ್ಧಾರ
ನಂತೂರು – ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗನ್ನು ಬಗೆಹರಿಸಲು ಮುಂದಾಗದಿದ್ದಲ್ಲಿ ಹೋರಾಟವನ್ನು ಮತ್ತಷ್ಟು ವಿಸ್ತಾರಗೊಳಿಸುವ, ಕೂಳೂರಿನಿಂದ ಜಿಲ್ಲಾಧಿಕಾರಿ ಕಚೇರಿ, ಅಥವಾ ಹೆದ್ದಾರಿ ಪ್ರಾಧಿಕಾರದವರಗೆ ಪಾದಯಾತ್ರೆ ನಡೆಸುವುದಾಗಿ ಘೋಷಿಸಲಾಯಿತು.
ಕಮೀಷನರ್ ಅನುಪಮ್ ಅಗರ್ ವಾಲ್ ಮೇಲೆ ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ತೀರ್ಮಾನ
ಜನರ ಪರವಾದ ಪ್ರತಿಭಟನೆ, ಜನಪರ ಸಂಘಟನೆಗಳನ್ನು ಹೀನಾಯವಾಗಿ ಕಾಣುವ, ಬೆದರಿಸುವ, ಪ್ರತಿಭಟಿಸುವ ಹಕ್ಕನ್ನು ನಿರ್ಬಂಧಿಸುವ ಮಂಗಳೂರು ಪೊಲೀಸ್ ಕಮೀಷನರ್ ಕುರಿತು ನಗರದ ಜನತೆ ಅಸಮಾಧಾನಿತರಾಗಿದ್ದಾರೆ. ಬಿಜೆಪಿ ಶಾಸಕರುಗಳ ಹಿತಾಸಕ್ತಿಗಳಿಗೆ ಪೂರಕವಾಗಿ ಕಮೀಷನರ್ ನಡೆದುಕೊಳ್ಳುತ್ತಿದ್ದಾರೆ. ಇಸ್ಪೀಟು, ಮಟ್ಕಾ, ಬೆಟ್ಟಿಂಗ್, ಮಸಾಜ್ ಪಾರ್ಲರ್ ಮುಂತಾದ ಕೆಟ್ಟ ದಂಧೆಗಳು ಮಂಗಳೂರು ನಗರದದಲ್ಲಿ ವ್ಯಾಪಕವಾಗಿದೆ, ನಗರದ ನೆಮ್ಮದಿಯನ್ನು ಕದಡಿದೆ. ಇದೆಲ್ಲದರಿಂದ ರಾಜ್ಯ ಸರಕಾರಕ್ಕೂ ಕೆಟ್ಟ ಹೆಸರು ಬರುತ್ತಿದೆ. ಕಮೀಷನರ್ ಅಗರ್ ವಾಲ್ ಅವರ ಮೇಲೆ ಕ್ರಮ ಕೈಗೊಳ್ಳಬೇಕು, ತಕ್ಷಣವೇ ಅವರನ್ನು ಮಂಗಳೂರಿನಿಂದ ವರ್ಗಾಯಿಸಬೇಕು, ಅವರ ಮೇಲಿನ ಗಂಭೀರ ಆರೋಪಗಳ ಕುರಿತು ಇಲಾಖಾ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಉಸ್ತುವಾರಿ ಸಚಿವರು, ಗೃಹ ಸಚಿವರು, ಮುಖ್ಯಮಂತ್ರಿಗಳಿಗೆ ನಿಯೋಗದ ಮೂಲಕ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
1 Comment