ಮಂಗಳೂರು ಖಾಸಗಿ ಬಸ್ ನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಗೆ ವಿಭಿನ್ನ ರೀತಿಯಲ್ಲಿ ಗೌರವ

ಮಂಗಳೂರು ಮಾರ್ಚ್ 12: ಪಾಕಿಸ್ತಾನದ ಎಫ್ -16 ಯುದ್ದ ವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್.. ಈ ಹೆಸರು ಈಗ ದೇಶದ ಮೂಲೆ ಮೂಲೆಯಲ್ಲೂ ಕೇಳಿ ಬರುತ್ತಿದೆ. ಅಲ್ಲದೇ ವೀರ ಯೋಧನ ಸಾಹಸವನ್ನ ಎಲ್ಲೆಡೆ ಕೊಂಡಾಡಲಾಗುತ್ತಿದೆ. ಜೊತೆಗೆ ವಿವಿಧೆಡೆ ಅಭಿನಂದನ್​ಗೆ ವಿಭಿನ್ನವಾಗಿ ಗೌರವ ಸಲ್ಲಿಸಲಾಗುತ್ತಿದೆ. ಅದರಂತೆ ಮಂಗಳೂರಿನಲ್ಲಿ ಖಾಸಗಿ ಬಸ್ ನಲ್ಲಿ ಅಭಿನಂದನ್ ಅವರ ಬಾವಚಿತ್ರವನ್ನು ಬಿಡಿಸಿ ಭಾರತೀಯ ಸೇನೆ ಹಾಗೂ ಅಭಿನಂದನ್ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ.

ಪಾಕಿಸ್ಥಾನದ ಅತ್ಯಾಧುನಿಕ ಯುದ್ದ ವಿಮಾನ ಎಫ್ 16 ಅನ್ನು ಹೊಡೆದುರುಳಿಸಿದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ದೇಶದಾದ್ಯಂತ ಗೌರವ ಸಲ್ಲಿಸಲಾಗುತ್ತಿದೆ. ಹಾಗೆಯೆ ಮಂಗಳೂರಿನ ಖಾಸಗಿ ಸರ್ವಿಸ್ ಬಸ್ ವಿಭಿನ್ನ ರೀತಿಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಗೆ ಗೌರವ ಸಲ್ಲಿಸುತ್ತಿದೆ.

ಸೈಂಟ್ ಆಂಟೋನಿ ಎಂಬ ಹೆಸರಿನ ರೂಟ್ ನಂ 14D ಬಸ್ ಇದಾಗಿದ್ದು ಮಂಗಳಾದೇವಿ – ಕಾವೂರು ರೂಟ್ ನಲ್ಲಿ ಈ ಬಸ್ ಸಂಚರಿಸುತ್ತದೆ.

ಈ ಬಸ್ ಗೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಬಾವ ಚಿತ್ರ ಬಿಡಿಸಿ ಅದರಲ್ಲಿ ” We Salute Indian Army ” ಎಂದು ಬರೆಯುವ ಮೂಲಕ ಭಾರತೀಯ ಸೇನೆಗೆ ಗೌರವ ಸಲ್ಲಿಸಲಾಗಿದೆ.

ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ 40ಕ್ಕೂ ಹೆಚ್ಚು ಸಿಆರ್‍ಪಿಎಫ್ ಯೋಧರು ಫೆಬ್ರವರಿ 14ರಂದು ಹುತಾತ್ಮರಾಗಿದ್ದರು. ಉಗ್ರರಿಗೆ ತಕ್ಕ ಪಾಠ ಕಲಿಸಲು ಭಾರತೀಯ ವಾಯು ಪಡೆಯು ಉಗ್ರರ ಮೂರು ನೆಲೆಗಳ ಫೆಬ್ರವರಿ 26ರಂದು ಏರ್ ಸ್ಟ್ರೈಕ್ ನಡೆಸಿ ಉಗ್ರರನ್ನು ನಾಶಗೊಳಿಸಿತ್ತು.

ನಂತರದ ದಿನ (ಫೆ.27ರಂದು) ಪಾಕಿಸ್ತಾನ ವಾಯು ಪಡೆಯ ಯುದ್ಧ ವಿಮಾನಗಳು ಗಡಿಯನ್ನು ದಾಟಿಬಂದು ಹಾರಾಟ ನಡೆಸಿದ್ದವು. ಈ ವೇಳೆ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಭಾರತೀಯ ಪೈಲಟ್ ಅಭಿನಂದನ್ ಅವರು ಹೊಡೆದುರುಳಿಸಿದ್ದರು. ಈ ಹೋರಾಟದಲ್ಲಿ ತಮ್ಮ ಮಿಗ್ 21 ವಿಮಾನಕ್ಕೆ ಹಾನಿಯುಂಟಾದ ಹಿನ್ನಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ ಅವರು, ಪ್ಯಾರಾಚೂಟ್ ಸಹಾಯದಿಂದ ಕೆಳಗೆ ಹಾರಿದ್ದರು. ಆದರೆ ಅಭಿನಂದನ್ ಅವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಿದ್ದಿದ್ದು, ಬಂಧನಕ್ಕೆ ಒಳಗಾಗಿದ್ದರು. ನಂತರ ಭಾರತದ ರಾಜತಾಂತ್ರಿಕ ಎಚ್ಚರಿಕೆಗೆ ಮಣಿದ ಪಾಕಿಸ್ತಾನ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆಗೊಳಿಸಿತ್ತು.