ಮಂಗಳೂರು ಜೂನ್ 26: ಮಂಗಳೂರು ನಗರದ ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಕುಖ್ಯಾತ ಡ್ರಗ್ ಪೆಡ್ಲರ್ನನ್ನು ಸಿಸಿಬಿ (CCB) ಪೊಲೀಸರು ಜೂನ್ 25ರಂದು ಗುರುವಾರ ತಡರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸುರತ್ಕಲ್ ಸಮೀಪದ ಕುಳಾಯಿ ಗುಡ್ಡೆ ಪರಿಸರದಲ್ಲಿರುವ ಬಾಡಿಗೆ ಮನೆಯೊಂದರಿಂದಲೇ ಈತ ಬೃಹತ್ ಮಾದಕ ದ್ರವ್ಯ ಜಾಲವನ್ನು ನಿಯಂತ್ರಿಸುತ್ತಿದ್ದ ಎನ್ನಲಾಗಿದೆ. ಕುಳಾಯಿ ಹೊಸಬೆಟ್ಟು ಮೂಲದ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು (26) ಬಂಧಿತ ಆರೋಪಿಯಾಗಿದ್ದಾನೆ.

ಆರೋಪಿಯು ಹೊರ ರಾಜ್ಯ ಅಥವಾ ಜಿಲ್ಲೆಗಳಿಂದ ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ಖರೀದಿಸಿ ತಂದು, ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಬಳಿಯಿರುವ ಸದಾನಂದ ಎಂಬುವರ ಬಾಡಿಗೆ ಮನೆಯಲ್ಲಿ ಶೇಖರಿಸಿಡುತ್ತಿದ್ದನು. ಬಳಿಕ ಅಲ್ಲಿಂದಲೇ ನಗರದ ವಿದ್ಯಾರ್ಥಿಗಳಿಗೆ ಸಣ್ಣ ಪ್ರಮಾಣದಲ್ಲಿ ಪ್ಯಾಕೆಟ್ ಮಾಡಿ ಸಪ್ಲೈ ಮಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಸಿಸಿಬಿ ಇಲಾಖೆ, ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯಿಂದ ಸುಮಾರು ₹1,50,000 ಮೌಲ್ಯದ 15 ಗ್ರಾಂ ನಿಷೇಧಿತ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಡ್ರಗ್ಸ್ ದಂಧೆಗೆ ಬಳಸುತ್ತಿದ್ದ ಮೊಬೈಲ್ ಫೋನ್, ಜಿಪ್ ಲಾಕ್ ಕವರ್ಗಳು ಮತ್ತು ಡಿಜಿಟಲ್ ತೂಕಮಾಪನ ಯಂತ್ರವನ್ನು (Digital Weighing Scale) ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಮೌಲ್ಯ ₹2,10,500 ಎಂದು ಅಂದಾಜಿಸಲಾಗಿದ್ದು, ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿ ಅಣ್ಣಪ್ಪ ಸ್ವಾಮಿ ಸಾಧಾರಣ ಅಪರಾಧಿಯಲ್ಲ, ಈತನ ಮೇಲೆ ಈ ಹಿಂದೆಯೇ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ. ಪಣಂಬೂರು ಮತ್ತು ಬಜಪೆ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಎರಡು ಎನ್ಡಿಪಿಎಸ್ (NDPS) ಮಾದಕ ದ್ರವ್ಯ ಪ್ರಕರಣಗಳು ದಾಖಲಾಗಿದ್ದವು. ಅಷ್ಟೇ ಅಲ್ಲದೆ, ಸುರತ್ಕಲ್ ಠಾಣೆಯಲ್ಲಿ ಸಾರ್ವಜನಿಕರ ಮೇಲೆ ಹಲ್ಲೆ ಹಾಗೂ ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದ ಮಸೀದಿಗೆ ಕಲ್ಲು ಎಸೆದಿರುವ ಕೃತ್ಯದ ಕೇಸ್ ಕೂಡ ಇವನ ಮೇಲಿದೆ. ಇನ್ನು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ (Attempt to Murder) ಪ್ರಕರಣವೂ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಮಂಗಳೂರು ನಗರ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ನಡೆಸಿದ್ದು, ಈ ಜಾಲದ ಹಿಂದೆ ಇನ್ನು ಹಲವು ಪ್ರಭಾವಿ ಪೆಡ್ಲರ್ಗಳು ಭಾಗಿಯಾಗಿರುವ ಶಂಕೆ ಇದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.