ಮಂಗಳೂರು ಜೂನ್ 19: ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ಸಾರ್ವಜನಿಕರು ಸಲ್ಲಿಸಿದ್ದ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC) ಅರ್ಜಿಗಳನ್ನು ಠಾಣಾ ಇನ್ಸ್ಪೆಕ್ಟರ್ ಗಮನಕ್ಕೆ ತಾರದೆ, ಅವರ ಕೆಜಿಐಡಿ ಮತ್ತು ಪಾಸ್ವರ್ಡ್ ಬಳಸಿ ಅಕ್ರಮವಾಗಿ ವಿಲೇವಾರಿ ಮಾಡಿದ ಬಜಪೆ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಲಾಗಿದೆ.

ಬಜಪೆ ಠಾಣೆಯ ಕಾನ್ಸ್ಟೇಬಲ್ಗಳಾದ ಮಂಜುನಾಥ್ ಮತ್ತು ಆಶಾ ಅಮಾನತುಗೊಂಡ ಸಿಬ್ಬಂದಿಯಾಗಿದ್ದಾರೆ. ಈ ದಂಧೆಗೆ ಸಹಕರಿಸಿದ ಎಕ್ಕಾರಿನ ಭರತ್ ಎಂಬ ಏಜೆಂಟ್ನನ್ನು ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಪಡೆಯುವ ನಿಟ್ಟಿನಲ್ಲಿ ಒಟ್ಟು 33 ಮಂದಿ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ಗಾಗಿ ಅರ್ಜಿ ಸಲ್ಲಿಸಿದ್ದರು. ನಿಯಮದ ಪ್ರಕಾರ ಅರ್ಜಿದಾರರ ಮನೆಗೆ ತೆರಳಿ ನೈಜ ಸ್ಥಳ ಪರಿಶೀಲನೆ (Verification) ನಡೆಸಬೇಕಾಗಿದ್ದ ಕಾನ್ಸ್ಟೇಬಲ್ಗಳಾದ ಮಂಜುನಾಥ್ ಹಾಗೂ ಆಶಾ, ಯಾವುದೇ ತನಿಖೆ ನಡೆಸದೆ ನೇರವಾಗಿ ಇನ್ಸ್ಪೆಕ್ಟರ್ ಅವರ ಕೆಜಿಐಡಿ (KGID) ಹಾಗೂ ಪಾಸ್ವರ್ಡ್ ಅನ್ನು ದುರ್ಬಳಕೆ ಮಾಡಿಕೊಂಡು ಅರ್ಜಿಗಳನ್ನು ಅಪ್ರೂವ್ ಮಾಡಿದ್ದರು. ಈ ಬಗ್ಗೆ ಬಜಪೆ ಠಾಣೆಯ ಇನ್ಸ್ಪೆಕ್ಟರ್ ಮತ್ತು ಠಾಣಾ ಬರಹಗಾರರು (Station Writer) ರೀ-ವೆರಿಫಿಕೇಶನ್ ನಡೆಸಿದಾಗ, ಒಟ್ಟು 33 ಅರ್ಜಿಗಳ ಪೈಕಿ 31 ಅರ್ಜಿಗಳನ್ನು ಕಾನೂನುಬಾಹಿರವಾಗಿ ನೇರವಾಗಿ ವಿಲೇವಾರಿ ಮಾಡಿರುವುದು ಪತ್ತೆಯಾಗಿದೆ.
ಈ ವ್ಯವಸ್ಥಿತ ಹಗರಣದ ಹಿಂದೆ ಭ್ರಷ್ಟಾಚಾರದ ಜಾಲ ಅಡಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅರ್ಜಿದಾರರನ್ನು ಕಮಿಷನ್ ದಂಧೆಗಾಗಿ ಏಜೆಂಟ್ ಭರತ್ ಬಳಿಗೆ ಕಳುಹಿಸುತ್ತಿದ್ದ ಖಾಸಗಿ ಸಂಸ್ಥೆಯೊಂದರ ಮಹಿಳಾ ಉದ್ಯೋಗಿಯ ವಿರುದ್ಧವೂ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲಾಖೆಯ ಆಂತರಿಕ ಲಾಗಿನ್ ಐಡಿಯನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರ ಸುರಕ್ಷತೆಯ ಜೊತೆ ಆಟವಾಡಿದ ಸಿಬ್ಬಂದಿಗಳ ವಿರುದ್ಧ ಇಲಾಖಾ ತನಿಖೆ ತೀವ್ರಗೊಂಡಿದೆ.