DAKSHINA KANNADA
ಮಂಗಳೂರು : ಸುರಲ್ಪಾಡಿ ಟೋಲ್ ಗೇಟ್ ನಿರ್ಮಾಣ ಸ್ಥಳಕ್ಕೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ತಂಡ ಭೇಟಿ ..!
ಮಂಗಳೂರು : ಮಂಗಳೂರು, ಮೂಡಬಿದ್ರೆ, ಕಾರ್ಕಳ ರಾಷ್ಟ್ರೀಯ ಹೆದ್ದಾರಿ ನಾಲ್ಕು ಪಥದ ರಸ್ತೆಯಾಗಿ ಮೇಲ್ದರ್ಜೆಗೆ ಏರುತ್ತಿದ್ದು, ನಂತೂರಿನಿಂದ 17 ಕಿ ಮೀ ದೂರದಲ್ಲಿ ಗಂಜಿಮಠದ ಸೂರಲ್ಪಾಡಿ ಮಸೀದಿ ಸಮೀಪ ಟೋಲ್ ಸಂಗ್ರಹ ಪ್ಲಾಝಾ ಕಾಮಗಾರಿ ಭರದಿಂದ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಸ್ಥೆ, ನಿಧಾನಗತಿ, ಸ್ವಜನ ಪಕ್ಷಪಾತದ ದೂರುಗಳು, ಟೋಲ್ ಸಂಗ್ರಹ ಪ್ಲಾಜ಼ಾ ನಿರ್ಮಾಣದ ಸ್ಥಳವನ್ನು ಅವೈಜ್ಞಾನಿಕವಾಗಿ ಗುರುತಿಸಿರುವ ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು.
ನಂತೂರು, ಮೂಡಬಿದ್ರೆ, ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೆ ಏರಿಸುವ ಕಾಮಗಾರಿಗೆ ಚಾಲನೆ ದೊರತು ಏಳೆಂಟು ವರ್ಷಗಳಾದರೂ ಕನಿಷ್ಟ 50 ಶೇಕಡಾ ಕಾಮಗರಿ ಇನ್ನೂ ಪೂರ್ಣಗೊಂಡಿಲ್ಲ. ಅದರಲ್ಲೂ ಅತಿ ವಾಹನ ದಟ್ಟಣೆಯ ನಂತೂರಿನಿಂದ ವಾಮಂಜೂರು ವರಗಿನ ಹೆದ್ದಾರಿಯಲ್ಲಿ ಕಾಮಗರಿಯೇ ಆರಂಭಗೊಂಡಿಲ್ಲ. ಕೆತ್ತಿಕಲ್ ಬಳಿ ಗುಡ್ಡವನ್ನು ತೀರಾ ಅಪಾಯಕಾರಿಯಾಗಿ ಕತ್ತರಿಸಿರುವುದರಿಂದ ಬೃಹತ್ ಗಾತ್ರದ ಇಡೀ ಗುಡ್ಡವೇ ಕುಸಿಯುವ ಅಪಾಯಕಾರಿ ಸ್ಥಿತಿ ಎದುರಾಗಿದೆ. ಗುಡ್ಡದ ಮೇಲ್ಗಾಗದ ವಸತಿಯ ನಿವಾಸಿಗಳು ಮನೆ ತೊರೆದು ಬೀದಿ ಪಾಲಾಗಿದ್ದಾರೆ. ಕೈಕಂಬದ ಬಳಿ ಮುಚ್ಚಿದ ಮೇಲ್ಸೇತುವ ನಿರ್ಮಾಣದಿಂದ ಇಡೀ ಪೇಟೆಯೆ ನಾಶದ ಭೀತಿ ಎದುರಿಸುತ್ತಿದೆ. ಗುರುಪುರ ಪೇಟೆಯನ್ನು ಉಳಿಸುವ ಉದ್ದೇಶದ ನೆಪದಲ್ಲಿ ಬೈಪಾಸ್ ರಸ್ತೆ ನಿರ್ಮಿಸುತ್ತಿರುವುದು ಸ್ಥಳೀಯವಾಗಿ ಭೂಮಿ ಖರೀದಿಸಿರುವ ಪ್ರಭಾವಿ ರಿಯಲ್ ಎಸ್ಟೇಟ್ ಲಾಭಿಗಳ ಹಿತಾಸಕ್ತಿಗಳಿಗಾಗಿ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ. ಐದಾರು ಕೀ ಮೀ ಉದ್ದದ ಈ ಬೈಪಾಸ್ ನಿಂದ ಹೆದ್ದಾರಿ ನಿರ್ಮಾಣದ ಬಜೆಟ್ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದು ಟೋಲ್ ದರವನ್ನು ದುಬಾರಿಯಾಗಿಸಲಿದೆ. ಈ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರು ಇದರ ಭಾರವನ್ನು ಹೊರಬೇಕಿದೆ.
ಈ ರೀತಿ ಹಲವು ದೂರುಗಳು ಬಹಳ ಕಾಲದಿಂದ ಕೇಳಿ ಬರುತ್ತಿದೆ. ಅದರ ಜೊತೆಗೆ ಈಗ ಟೋಲ್ ಸಂಗ್ರಹಕ್ಕಾಗಿ ಟೋಲ್ ಪ್ಲಾಜ಼ಾ ನಿರ್ಮಿಸುತ್ತಿರುವ ಸ್ಥಳ ಅವೈಜ್ಞಾನಿಕವಾಗಿದೆ ಎಂದು ಹಲವು ದೂರುಗಳು ಬರುತ್ತಿವೆ. ಈ ಟೋಲ್ ಗೇಟ್ ತಲಪಾಡಿ ಟೋಲ್ ಸಂಗ್ರಹ ಕೇಂದ್ರದಿಂದ 36 ಕಿ ಮೀ, ಹೆಜಮಾಡಿ ಟೋಲ್ ಗೇಟ್ ನಿಂದ 45 ಕಿ ಮೀ, ಬಿ ಸಿ ರೋಡ್ ಟೋಲ್ ಗೇಟ್ ನಿಂದ 35 ಕಿ ಮೀ ಅಂತರದಲ್ಲಿದೆ. ಇದು ಒಂದು ಟೋಲ್ ಗೇಟ್ ನಿಂದ ಮತ್ತೊಂದು ಟೋಲ್ ಗೇಟ್ ನ ನಡುವೆ ಇರಬೇಕಾದ ಅಂತರದ ನಿಯಮವನ್ನು ಉಲ್ಲಂಘಿಸುತ್ತದೆ, ಹಾಗೂ ಮಸೀದಿ, ಮದುವೆ ಮಂಟಪ, ಶಾಲೆಗಳಿಗೆ ಕೂಗಳತೆ ದೂರದಲ್ಲಿ ನಿರ್ಮಿಸಲಾಗುತ್ತಿದೆ ಎಂಬ ಆಕ್ಷೇಪಗಳು ವ್ಯಕ್ತವಾಗುತ್ತಿದೆ.
ಇದಲ್ಲದೆ, ರಸ್ತೆ ಕಾಮಗಾರಿ 50 ಶೇಕಡಾ ಪೂರ್ಣಗೊಳ್ಳದೆ ತರಾತುರಿಯಿಂದ ಟೋಲ್ ಗೇಟ್ ನಿರ್ಮಿಸುತ್ತಿರುವುದು ಕಾಮಗಾರಿ ಪೂರ್ಣಗೊಳ್ಳದೆ ಬಲವಂತದ ಟೋಲ್ ಸುಲಿಗೆ ಆರಂಭಗೊಳ್ಳುವ ಸಾಧ್ಯತೆ ಕುರಿತು ನಾಗರಿಕರಲ್ಲಿ ಆತಂಕ ಮನೆ ಮಾಡಿದೆ. ಅದಲ್ಲದೆ, ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ನಾಗರಿಕರ, ಸ್ಥಳೀಯರ ಯಾವುದೇ ದೂರುಗಳಿಗೆ ಹೆದ್ದಾರಿ ಪ್ರಾಧಿಕಾರ ಸ್ಪಂದಿಸುತ್ತಿಲ್ಲ, ಪರಿಗಣಿಸುತ್ತಿಲ್ಲ ಎಂಬ ಆಕ್ರೋಶವೂ ಸಾರ್ವಜನಿಕರಲ್ಲಿದೆ. ಈ ಎಲ್ಲಾ ದೂರುಗಳು, ಆತಂಕದ ಹಿನ್ನಲೆಯಲ್ಲಿ ಇಂದು ಸೂರಲ್ಪಾಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಟೋಲ್ ಪ್ಲಾಜ಼ಾ ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ನಿಯೋಗದಲ್ಲಿ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಸಾಮಾಜಿಕ ಕಾರ್ಯಕರ್ತ ಬಾವಾ ಪದರಂಗಿ, ಡಿವೈಎಫ್ಐ ಮುಂದಾಳು ಶ್ರೀನಾಥ್ ಕುಲಾಲ್, ಕಾರ್ಮಿಕ ನಾಯಕರಾದ ನೋಣಯ್ಯ ಗೌಡ, ಗೋಪಾಲ ಮೂಲ್ಯ, ಆದಿವಾಸಿ ಹಕ್ಕುಗಳ ಸಮಿತಿಯ ಕರಿಯ ವಾಮಂಜೂರು ಉಪಸ್ಥಿತರಿದ್ದರು.
You must be logged in to post a comment Login