DAKSHINA KANNADA
ಮಂಗಳೂರು: ಹಳೆ ಮನೆ ಕೆಡವುತ್ತಿದ್ದಾಗ ಗೋಡೆ ಸಮೇತ ಲಿಂಟಲ್ ಬಿದ್ದು ಇಬ್ಬರು ಸಹೋದರರು ಮೃತ್ಯು..!
ಮಂಗಳೂರು : ಹಳೆ ಮನೆ ಕೆಡವುತ್ತಿದ್ದಾಗ ಗೋಡೆ ಸಮೇತ ಲಿಂಟಲ್ ಬಿದ್ದು ಇಬ್ಬರು ಮೃತಪಟ್ಟ ದಾರುಣ ಘಟನೆ ಮಂಗಳೂರು ನಗರದ ಜೈಲ್ ರೋಡಿನಲ್ಲಿ ಗುರುವಾರ ಅಪರಾಹ್ನ ಸಂಭವಿಸಿದೆ.
ಜೇಮ್ಸ್ ಜತ್ತಣ್ಣ ಮತ್ತು ಎಡ್ವಿನ್ ಮಾಬೇನ್ ಮೃತ ದುರ್ದೈವಿಗಳಾಗಿದ್ದಾರೆ. ಜೇಮ್ಸ್ ಜತ್ತನ್ನ ಪೂರ್ವಜರ ಮನೆ ಇದಾಗಿದ್ದು, ಪಾಲಿನಲ್ಲಿ ಅವರಿಗೆ ಈ ಮನೆ ಸಿಕ್ಕಿತ್ತು. ಮನೆಗೆ ತಾಗಿಕೊಂಡಂತೆ ಅಡ್ವಿನ್ ಅವರ ಮನೆ ಇದೆ. ಜೇಮ್ಸ್ ಅವರು ತನ್ನ ಹಳೆ ಮನೆಯನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಮನೆ ಕಟ್ಟಲು ಉದ್ದೇಶಿಸಿದ್ದು, ಅದರಂತೆ ಜೆಸಿಬಿ ಮೂಲಕ ಮನೆ ಕೆಡಹುವ ಕಾರ್ಯ ಬುಧವಾರ ಆರಂಭವಾಗಿತ್ತು.
ಗುರುವಾರ ಬೆಳಗ್ಗೆ ಮತ್ತೆ ಕೆಲಸ ಆರಂಭವಾಗಿದ್ದು, ಈ ವೇಳೆ ಜೇಮ್ಸ್ ಸ್ಥಳದಲ್ಲೇ ಇದ್ದು ಉಸ್ತುವಾರಿ ನೋಡಿಕೊಂಡಿದ್ದರು. ಈ ಮನೆಗೆ ತಾಗಿಕೊಂಡೇ ಅಡ್ವಿನ್ ಮನೆ ಇರುವುದರಿಂದ ಕೆಡಹುವ ಸಮಯದಲ್ಲಿ ಅಡ್ವಿನ್, ತಮ್ಮ ಮನೆಗೆ ಹಾನಿಯಾಗಿದೆಯೇ ಎಂಬುದನ್ನು ನೋಡಲು ಜೇಮ್ಸ್ ಮನೆ ಕಂಪೌಂಡಿಗೆ ಬಂದಿದ್ದರು. ಈ ಸಂದರ್ಭ ಜೇಮ್ಸ್ ಅವರು ಪಕ್ಕದ ಇನ್ನೊಂದು ಮನೆಯ ಜಗುಲಿಯಲ್ಲಿದ್ದು, ಅಡ್ವಿನ್ ಕರೆದರೆಂದು ಅಲ್ಲಿಗೆ ತೆರಳಿ ಮಾತುಕತೆ ನಡೆಸುತ್ತಿದ್ದಾಗ ಹಠಾತ್ತನೆ ಕೆಡಹುತ್ತಿದ್ದ ಮನೆಯ ಗೋಡೆ ಸಮೇತ ಬೃಹತ್ ಕಾಂಕ್ರೀಟ್ ಲಿಂಟಲ್ ಇಬ್ಬರ ಮೇಲೂ ಉರುಳಿಬಿತ್ತು. ಭಾರೀ ಗಾತ್ರದ ಲಿಂಟಲ್ ಆಗಿದ್ದರಿಂದ ಇಬ್ಬರೂ ಅದರಡಿ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಮನೆ ಕಟ್ಟಲು ಬಹರೇನ್‌ನಿಂದ ಬಂದಿದ್ದರು:
ಜೇಮ್ಸ್ ತಮ್ಮ ಪತ್ನಿ ಮತ್ತು ಪುತ್ರಿಯೊಂದಿಗೆ ವಾಸವಾಗಿದ್ದರು. ಪೂರ್ವಜರ ಕಾಲದ ಮನೆ ತೀರ ಹಳೆಯದಾಗಿ ಶಿಥಿಲವಾಗಿದ್ದರಿಂದ ನಗರದ ಜ್ಯೋತಿಯಲ್ಲಿ ಫ್ಲಾಟ್‌ನಲ್ಲಿ ವಾಸವಾಗಿದ್ದರು. ಪತ್ನಿ, ಪುತ್ರಿ ಫ್ಲಾಟ್‌ನಲ್ಲಿದ್ದರೆ, ಜೇಮ್ಸ್ ಬಹರೇನ್‌ನಲ್ಲಿ ಉದ್ಯೋಗದಲ್ಲಿದ್ದರು. ಹಳೆ ಮನೆ ಕೆಡವಿ ಹೊಸ ಮನೆ ಕಟ್ಟಲೆಂದೇ ಅವರು ರಜೆ ಹಾಕಿ ಊರಿಗೆ ಮರಳಿದ್ದರು. ಅವರ ಕುಟುಂಬ ಹೊಸ ಮನೆಯ ಕನಸು ಕಾಣುತ್ತಿದ್ದಾಗಲೇ ಜೇಮ್ಸ್ ಅವರ ಅನಿರೀಕ್ಷಿತ ಸಾವು ಕುಟುಂಬವನ್ನು ಕಂಗೆಡಿಸಿದೆ. ಮೃತ ಅಡ್ವಿನ್ ಹೆರಾಲ್ಡ್ ಮಾಬೆನ್ ತಮ್ಮ ಸಂಬಂಧಿಕರೊಂದಿಗೆ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಕೆಡಹುವಲ್ಲಿ ಬರಬೇಡಿ ಎಂದಿದ್ದರು:
ಮನೆ ಕೆಡಹುವಾಗ ಅವಘಡ ಸಂಭವಿಸದಿರಲೆಂಬ ಮುನ್ನೆಚ್ಚರಿಕೆಯಿಂದ ಜೆಸಿಬಿ ಆಪರೇಟರ್, ಸ್ಥಳದಲ್ಲಿ ನಿಲ್ಲದಂತೆ ಜೇಮ್ಸ್ ಅವರಿಗೆ ತಿಳಿಸಿದ್ದರು. ಆದರೆ ದುರದೃಷ್ಟವಶಾತ್ ಜೇಮ್ಸ್ ಆ ಕಡೆ ತೆರಳಿದ್ದಾಗಲೇ ಲಿಂಟಲ್ ಕುಸಿದು ಬಿದ್ದು ಅನಾಹುತ ನಡೆದುಹೋಗಿದೆ. ಬೆಳಗ್ಗೆ 10.45ರ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದರೂ ಮಧ್ಯಾಹ್ನದವರೆಗೆ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಕದ್ರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login