Connect with us

LATEST NEWS

ಕುಲಪತಿ ಹುದ್ದೆಗೆ ಲಂಚ ನೀಡಿದ್ದ ಮಂಗಳೂರು ವಿವಿ ಪ್ರಾಧ್ಯಾಪಕ ಡಾ.ಎಂ.ಜೈಶಂಕರ್‌ ಅಮಾನತು

ಮಂಗಳೂರು ಎಪ್ರಿಲ್ 10: ಕುಲಪತಿ ಹುದ್ದೆಗಾಗಿ ರಾಮಸೇನೆಯ ಸ್ಥಾಪಕಾಧ್ಯಕ್ಷ ಪ್ರಸಾದ್ ಅತ್ತಾವರಗೆ ಲಂಚ ನೀಡಿದ್ದ ಮಂಗಳೂರು ವಿಶ್ವವಿದ್ಯಾಲಯದ ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಜೈಶಂಕರ್‌ ಅವರನ್ನು ಅಮಾನತು ಮಾಡಲಾಗಿದೆ.
ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಿಂಡಿಕೇಟ್ ವಿಶೇಷ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.


ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಪಡೆಯುವುದಕ್ಕಾಗಿ ರಾಮಸೇನೆಯ ಸ್ಥಾಪಕಾಧ್ಯಕ್ಷ ಪ್ರಸಾದ್ ಅತ್ತಾವರ್‌ಗೆ ₹17.50 ಲಕ್ಷ ನೀಡಿ ವಂಚನೆಗೆ ಒಳಗಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ಮಂಗಳೂರು ವಿಶ್ವವಿದ್ಯಾಲಯದ ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಜೈಶಂಕರ್‌ ಅವರ ವಿರುದ್ದ ಸಿಂಡಿಕೇಟ್ ಸದಸ್ಯರ ಮನವಿಯಂತೆ ಪ್ರಕರಣದ ಬಗ್ಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ಮಾಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಎಂ.ಜೈಶಂಕರ್‌ಗೆ ನೋಟಿಸ್ ನೀಡಲಾಗಿತ್ತು. ಆಂತರಿಕ ತನಿಖಾ ವರದಿ ಬರುವವರೆಗೆ ಡಾ.ಜೈಶಂಕರ್‌ ಅವರನ್ನು ಅಮಾನತು ಮಾಡಲು ಶುಕ್ರವಾರ ನಡೆದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ. ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ಮಾಡಿಸಲಾಗುವುದು ಎಂದು ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.