ಮಂಗಳೂರು ಸೆಪ್ಟೆಂಬರ್ 12: ಸುರತ್ಕಲ್‌ನಿಂದ ಬಿಸಿ ರೋಡ್ ವರೆಗಿನ ರಸ್ತೆಯ ತುರ್ತು ಅಭಿವೃದ್ಧಿಗೆ ₹ 28.5 ಕೋಟಿ ವಿಶೇಷ ಅನುದಾನ ಬಂದಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದರು. ಅಲ್ಲದೆ ಹೆದ್ದಾರಿಯ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದು ಏಜೆನ್ಸಿ ಗೊತ್ತುಮಾಡುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಹೆದ್ದಾರಿಯ ಸಮಸ್ಯೆ ಪರಿಹಾರಕ್ಕೆ ಮೂರು ಇಲಾಖೆಗಳು ಜೊತೆಗೂಡಿ ಕಾರ್ಯಪ್ರವೃತ್ತವಾಗಬೇಕು ಎಂದು ಸೂಚಿಸಿದ ಸಂಸದರು ಸುರತ್ಕಲ್–ಬಿಸಿ ರೋಡ್ ವರೆಗಿನ ರಸ್ತೆ ಈಗ ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟ ಹೊಂದಿಲ್ಲ. ಈ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಮತ್ತು 35 ಕಿಮೀ ಬೈಪಾಸ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಕೆಲವೇ ತಿಂಗಳಲ್ಲಿ ಕಾಮಗಾರಿಯ ಸ್ಪಷ್ಟ ಚಿತ್ರಣ ಲಭಿಸಲಿದೆ. ಒಟ್ಟು 11 ಕಿಮೀ ಮರುಡಾಂಬರೀಕರಣ ಸದ್ಯದಲ್ಲೇ ಆಗಲಿದೆ ಎಂದರು.

ಅಭಿವೃದ್ಧಿ ಕಾಮಗಾರಿ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅಜ್ಮಿ ಅಭಿವೃದ್ಧಿ ಕಾಮಗಾರಿಯನ್ನು ಒಂದೇ ಹಂತದಲ್ಲಿ ಮಾಡಲು ನಿರ್ಧರಿಸಲಾಗಿದೆ. ಕಾಂಕ್ರಿಟ್ ರಸ್ತೆಯಾಗಿ ಮಾರ್ಪಡಿಸಲು ಚಿಂತನೆ ನಡೆದಿತ್ತು. ಆದರೆ ಅದಕ್ಕೆ ತುಂಬ ಸಮಯ ತಗಲುತ್ತದೆ. ಬದಲಿ ರಸ್ತೆಗಳು ಕಡಿಮೆ ಇರುವುದರಿಂದ ವಾಹನಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯ. ಆದ್ದರಿಂದ ಬಿಟುಮನ್ (ಡಾಂಬರ್) ಹಾಕಲು ನಿರ್ಧರಿಸಲಾಗಿದೆ ಎಂದರು. ಗುಂಡಿಗಳನ್ನು ಮುಚ್ಚುವ ಕಾರ್ಯ ಒಂದು ವಾರದಲ್ಲಿ ಮುಗಿಯಲಿದ್ದು ಅಕ್ಟೋಬರ್ ಮೊದಲ ವಾರದಿಂದ ಮರುಡಾಂಬರೀಕರಣ ನಡೆಯಲಿದೆ ಎಂದು ಟೆಂಡರ್ ಪಡೆದುಕೊಂಡಿರುವ ಮುಗರೋಡಿ ಕನ್‌ಸ್ಟ್ರಕ್ಷನ್ಸ್‌ನ ಸುಧಾಕರ ಶೆಟ್ಟಿ ತಿಳಿಸಿದರು.
ನಗರದ ರಸ್ತೆ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಾಣಬೇಕು ಎಂದು ಸೂಚಿಸಿದ ಶಾಸಕ ವೇದವ್ಯಾಸ ಕಾಮತ್ ನಗರಪಾಲಿಕೆಯಲ್ಲಿ ಆರ್ಥಿಕ ಸಮಸ್ಯೆ ಇರುವುದು ನಿಜ. ಆದರೆ ಜನರಿಗೆ ಉತ್ತಮ ರಸ್ತೆಗಳನ್ನು ನೀಡಲೇಬೇಕು. ಆದ್ದರಿಂದ ಹೊಂಡಗಳನ್ನು ಕಂಡರೆ ಮುಚ್ಚಲು ಕ್ರಮ ಕೈಗೊಳ್ಳುವುದು ಎಂಜಿನಿಯರ್‌ಗಳ ಜವಾಬ್ದಾರಿ ಎಂದರು. ನಗರದಲ್ಲಿ 22 ರಸ್ತೆಗಳ ಅಭಿವೃದ್ಧಿ ತುರ್ತಾಗಿ ಆಗಬೇಕು. ನವರಾತ್ರಿ ಸಂದರ್ಭದಲ್ಲಿ ಸಮಸ್ಯೆ ಉಲ್ಬಣಿಸದಂತೆ ನೋಡಿಕೊಳ್ಳಬೇಕು. ಮೆರವಣಿಗೆ ಸಾಗುವ ರಸ್ತೆಗಳ ಮೇಲೆ ವಿಶೇಷ ಗಮನ ಬೇಕು ಎಂದು ಅವರು ಸೂಚಿಸಿದರು. ಆದಷ್ಟು ಬೇಗ ಕಾರ್ಯಪ್ರವೃತ್ತರಾಗುವುದಾಗಿ ಪಾಲಿಕೆ ಮುಖ್ಯ ಎಂಜಿನಿಯರ್ ನರೇಶ್ ಶೆಣೈ ತಿಳಿಸಿದರು.



