ಮಂಗಳೂರು ನವೆಂಬರ್ 07: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿರುವ ಮೊಬೈಲ್ ಜಾಮರ್ ನಿಂದಾಗಿ ಸ್ಥಳೀಯ ಜನರು ಸಮಸ್ಯೆ ಅನುಭವಿಸುತ್ತಿದ್ದು, ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ. ಇದೀಗ ರಾಜ್ಯ ಹೈಕೋರ್ಟ್ ಈ ಸಮಸ್ಯೆಗೆ ಹೈಕೋರ್ಟ್ ಎಂಟ್ರಿಕೊಟ್ಟಿದ್ದು, ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಿದ ಸಿಗ್ನಲ್ ಜಾಮರ್‌ಗೆ ಸಂಬಂಧಿಸಿ ಹೈಕೋರ್ಟ್ ಒಂದು ವಾರದೊಳಗೆ ತಾಂತ್ರಿಕ ವರದಿ ಸಲ್ಲಿಸುವಂತೆ ಸೂಚಿಸಿದೆ.

ಸಿಗ್ನಲ್ ಜಾಮರ್‌ಸಮಸ್ಯೆ ಬಗ್ಗೆ ಮಂಗಳೂರು ವಕೀಲರ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು. ಜೈಲಿನ ಒಳಗೆ ಹಾಗೂ ಜೈಲಿನಿಂದ ನ್ಯಾಯಾಲಯದ ವರೆಗಿನ ಸಿಗ್ನಲ್ ಬಲದ ತಾಂತ್ರಿಕ ವರದಿ ಸಲ್ಲಿಸಬೇಕು. ಬೇರೆ ಬೇರೆ ಸ್ಥಳಗಳಲ್ಲಿ ಮೊಬೈಲ್ ಸಿಗ್ನಲ್ ಶಕ್ತಿಯ ಬಗ್ಗೆ ತಾಂತ್ರಿಕ ವರದಿ ದಾಖಲಿಸಬೇಕು ಎಂದು ಕೋರ್ಟ್ ಸೂಚನೆ ನೀಡಿದೆ. ಜೈಲಿನ ಮೊಬೈಲ್ ಸಿಗ್ನಲ್ ಜಾಮರ್ ಮಂಗಳೂರು ನಗರಕ್ಕೆ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರ ವಿರುದ್ಧ ಮಂಗಳೂರು ಬಾರ್ ಅಸೋಸಿಯೇಷನ್ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತಾಂತ್ರಿಕ ವರದಿ ಸಲ್ಲಿಕೆಗೆ ಒಂದು ವಾರದ ಗಡುವು ವಿಧಿಸಿತು.

ನವೆಂಬರ್18ಕ್ಕೆ ವಿಚಾರಣೆ ಮುಂದೂಡಿದ್ದು, ಸರ್ಕಾರದ ಪರ ವಕೀಲರಿಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಯಾವ ಯಾವ ಸ್ಥಳಗಳಲ್ಲಿ ಸಿಗ್ನಲ್ ಎಷ್ಟು ಬಲವಾಗಿದೆ ಎಂದು ಪರಿಶೀಲಿಸಬೇಕು. ಜೈಲಿನ ಜಾಮರ್‌ಗಳು ಮೊಬೈಲ್ ಸಿಗ್ನಲ್‌ಗಳ ಮೇಲೆ ಪರಿಣಾಮ ಬೀರಿವೆಯೇ ಎಂಬುದನ್ನೂ ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಸರ್ಕಾರ ಅಥವಾ ಸಂಬಂಧಿತ ಪ್ರತಿವಾದಿಗಳಿಗೆ ಆ ಜಾಮರ್‌ಗಳನ್ನು ತೆಗೆದುಹಾಕುವಂತೆ ಆದೇಶಿಸಬೇಕು ಎಂದು ರಿಟ್ ಅರ್ಜಿಯಲ್ಲಿ ವಿನಂತಿಸಲಾಗಿದೆ. ಜೈಲ್ ಜಾಮರ್‌ನಿಂದಾಗಿ ಮಂಗಳೂರು ನ್ಯಾಯಾಲಯ ಆವರಣದೊಳಗಿನ ಇಂಟರ್ನೆಟ್ ಸೇವೆಗಳ ಮೇಲೆ ದುಷ್ಪರಿಣಾಮ ಉಂಟಾಗಿದೆ. ಆದ್ದರಿಂದ ತಾತ್ಕಾಲಿಕವಾಗಿ ಜಾಮರ್‌ಗಳನ್ನು ತೆಗೆದುಹಾಕುವಂತೆ ಸರ್ಕಾರಕ್ಕೆ ತಕ್ಷಣದ ಆದೇಶ ನೀಡಬೇಕು ಎಂದು ಮನವಿ ಸಲ್ಲಿಸಲಾಗಿದೆ. ಕಳೆದ ಏಪ್ರಿಲ್‌ನಲ್ಲೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.



