ಮಂಗಳೂರು, ಜನವರಿ 16 : ದಕ್ಷಿಣಕನ್ನಡದಲ್ಲಿ ಜನರಿಗೆ ಮನೆ ಕಾರು ಚಿನ್ನದ ಆಮಿಷ ಒಡ್ಡಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡುತ್ತಿರುವ ಲಕ್ಕಿ ಸ್ಕೀಮ್ ಗಳ ವಿರುದ್ದ ಮಂಗಳೂರಿನಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.

ನ್ಯೂ ಇಂಡಿಯಾ ಲಕ್ಕಿ ಸ್ಕೀಮ್ ಕಂಪೆನಿಯಿಂದ ವಂಚನೆಗೆ ಒಳಗಾದ ಸಂತ್ರಸ್ತರ ಪ್ರತಿಭಟನೆಯಲ್ಲಿ ಮಾತನಾಡಿದ ಡಿವೈಎಫ್ಐ ಮುಖಂಡ ಬಿ.ಕೆ ಇಮ್ತಿಯಾಜ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಧಿಕ್ಕರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗಿದೆ. ಮಂಗಳೂರಿನಲ್ಲಿ ಸುಮಾರು 100ಕ್ಕೂ ಹೆಚ್ಚು ಬ್ಲೇಡ್ ಕಂಪೆನಿಗಳು ಸಾವಿರಾರು ಕೋಟಿ ಜನರಿಂದ ಸಂಗ್ರಹಿಸಿದೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಇವರ ವಂಚನಾ ಜಾಲ ವಿಸ್ತರಣೆ ಆಗಿದೆ. ಜಿಲ್ಲೆಯಲಿರುವ ಎಲ್ಲಾ ಲಕ್ಕಿ ಸ್ಕೀಮ್ ಗಳು ಕಾನೂನು ಬಾಹಿರವಾಗಿ ಕಾರ್ಯಾಚರಿಸುತ್ತಿದೆ, ಇವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಬಡವರ ಪ್ರಾಮಾಣಿಕತೆಯನ್ನು ಹೈಜಾಕ್ ಮಾಡಲಾಗಿದೆ, ಮಕ್ಕಳ ವಿದ್ಯಾಭ್ಯಾಸ, ಹೆಣ್ಣು ಮಕ್ಕಳ ಮದುವೆಗೆ ಸಹಾಯ ಆಗಲೆಂದು ಹೂಡಿಕೆ ಮಾಡಿದ್ದ ಬಡಪಾಯಿಗಳಿಗೆ ಅನ್ಯಾಯ ಆಗಿದೆ. ನ್ಯೂ ಇಂಡಿಯಾ ಕಂಪೆನಿ ಮಾಲೀಕನಿಂದ 50 ಕೋಟಿಯ ವಂಚನೆ ಆಗಿದೆ.

ಪ್ರಭಾವಿ ರಾಜಕಾರಣಿಗಳ ಸಹಕಾರದಿಂದಾಗಿ ಈ ರೀತಿಯ ವಂಚನೆ ಮಾಡಲು ಸಾಧ್ಯವಾಗಿದೆ. ಪೊಲೀಸರು ಮತ್ತು ಲೀಡ್ ಬ್ಯಾಂಕ್ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿದ್ದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ವಂಚನೆ ಆಗುತ್ತಿರಲಿಲ್ಲ ಎಂದು ಅವರು ಹೇಳಿದರು.