Connect with us

LATEST NEWS

ಮಂಗಳೂರಿನಲ್ಲಿ ಈ ಬಾರಿ ಸರಳ ಗಣೇಶೋತ್ಸವ, ಹಲವು ಸಾರ್ವಜನಿಕ ಗಣೇಶೋತ್ಸವ ಆಚರಣೆ ರದ್ದು……

ಮಂಗಳೂರು ಅಗಸ್ಟ್ 22: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಈ ಬಾರಿ ಗಣೇಶೋತ್ಸವವನ್ನು ಅತ್ಯಂತ ಸರಳ ರೀತಿಯಲ್ಲಿ ಮಂಗಳೂರಿನಲ್ಲಿ ಆಚರಿಸಲಾಯಿತು. ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ವತಿಯಿಂದ ಗಣೇಶನ ವಿಗ್ರಹದ ಪ್ರತಿಷ್ಟಾಪನೆ ನಡೆದಿದೆ. ಆದರೆ ಕೆಲವು ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಯನ್ನು ಈ ಬಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಪ್ರತೀ ವರ್ಷ ಅತ್ಯಂತ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಗುತ್ತಿದ್ದು, ಆದರೆ ಈ ಬಾರಿ ಮಾತ್ರ ಅದ್ದೂರಿಗೆ ತೆರೆ ಬಿದ್ದಿದೆ. ಸಾರ್ವಜನಿಕ ಗಣೇಶೋತ್ಸವ ಆಚರಿಸುವವರಿಗೆ ಸರಕಾರದ ಸ್ಪಷ್ಟ ಮಾರ್ಗಸೂಚಿ ಹಿನ್ನಲೆಯಲ್ಲಿ ಸಭೆ-ಸಮಾರಂಭಗಳಿಲ್ಲದೆ ಈ ಬಾರಿ ಗಣೇಶೋತ್ಸವ ಆಚರಣೆ ಆರಂಭಗೊಂಡಿದೆ. ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶ ಪ್ರತಿಷ್ಟಾಪನೆಯನ್ನು ಈ ಬಾರಿ ಸ್ಥಗಿತಗೊಳಿಸಲಾಗಿದ್ದು, ಇಲ್ಲಿನ ಧಾರ್ಮಿಕ ಆಚರಣೆಗಳನ್ನು ಮಂಗಳೂರಿನ ಬಾಲಂಭಟ್ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಏಳು ದಿನಗಳ ಕಾಲ ನಡೆಯುತ್ತಿದ್ದ ಈ ಕಾರ್ಯಕ್ರಮವನ್ನು ಕೇವಲ ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯ ಸಂಘ ನಿಕೇತನದಲ್ಲಿಯೂ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಸರಕಾರದ ಸೂಚನೆಯಂತೆ ಗಣೇಶನ ವಿಗ್ರಹದ ಗಾತ್ರದಲ್ಲಿ ಬದಲಾವಣೆ ಮಾಡಲಾಗಿದೆ. ಐದು ದಿನಗಳ ಕಾಲ ಇಲ್ಲಿ ಗಣೇಶೋತ್ಸವ ಆಚರಣೆ ನಡೆಯಲಿದ್ದು, ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಮಾಸ್ಕ ಕಡ್ಡಾಯ ಮಾಡಲಾಗಿದೆ. ಅಲ್ಲದೆ ಭಕ್ತರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕಾನಿಂಗ್, ಎಲ್ಲಾ ಭಕ್ತದ ವಿವರಗಳ ದಾಖಲಾತಿ, ಸಾಮಾಜಿಕ ಅಂತರನ್ನೂ ಇಲ್ಲಿ ಕಾಯ್ದಕೊಳ್ಳಲಾಗುತ್ತಿದೆ. ದೇವರ ದರ್ಶನಕ್ಕೆ ಒಂದು ಬಾರಿಗೆ ಕೇವಲ 20 ಭಕ್ತರಿಗೆ ಮಾತ್ರ ಅವಕಾಶವನ್ನೂ ಕಲ್ಪಿಸಲಾಗಿದೆ.


ಮಂಗಳೂರಿನ ಬಂಟರ ಭವನದಲ್ಲಿ ಪ್ರತೀ ಬಾರಿಯೂ ನಡೆಯುತ್ತಿದ್ದ ಗಣೇಶ ವಿಗ್ರಹ ಪ್ರತಿಷ್ಟಾಪನೆ ಹಾಗೂ ಆಚರಣೆಯನ್ನು ಈ ಬಾರಿ ಕೈ ಬಿಡಲಾಗಿದೆ. ಅಲ್ಲದೆ ಹಲವು ಕಡೆಗಳಲ್ಲಿ ಇದೇ ರೀತಿಯ ನಿರ್ಧಾರಕ್ಕೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಬಂದಿದೆ. ಗಣೇಶೋತ್ಸವದಲ್ಲಿ ಆದ ಬದಲಾವಣೆಯನ್ನು ಭಕ್ತಾಧಿಗಳೂ ಒಪ್ಪಿಕೊಂಡು ಸರಳ ಗಣೇಶನ ಉತ್ಸವ ಆಚರಣೆಗೆ ಮುಂದಾಗಿದ್ದಾರೆ.

Facebook Comments

comments