ಮಂಗಳೂರು ಚರ್ಚ್ ದಾಳಿ ಪ್ರಕರಣ : ದೋಷಮುಕ್ತನಾದ ಬಜರಂಗದಳದ ಮಾಜಿ ಸಂಚಾಲಕ

ಮಂಗಳೂರು, ಫೆಬ್ರವರಿ 06 : ಮಂಗಳೂರಿನ ಕ್ರೈಸ್ತರ ಪ್ರಾರ್ಥನ ಮಂದಿರಗಳಿಗೆ ದಾಳಿ ನಡೆಸಿ ದಾಂದಲೆ ನಡೆಸಿದ ಪ್ರಕರಣವನ್ನು ಸಮರ್ಥಿಸಿದ್ದ ಅಂದಿನ ಬಜರಂಗದಳ ಸಂಚಾಲಕ ಹಾಗೂ ಪ್ರಸ್ತುತ ಜೆಡಿಎಸ್ ನಾಯಕರಾಗಿರುವ ಮಹೇಂದ್ರ ಕುಮಾರ್ ಮೇಲಿದ್ದ ಕೊನೆಯ ಕೇಸ್ ಖುಲಾಸೆ ಗೊಂಡಿದೆ.

2008 ಸೆಪ್ಟೆಂಬರ್ 14 ರಂದು ಬೆಳಗ್ಗೆ ಮಂಗಳೂರು ನಗರದ ಮಿಲಾಗ್ರಿಸ್ ಬಳಿಯ ಎಡೋರೇಶನ್ ಮೊನೆಸ್ಟ್ರಿಯಲ್ಲಿ ಧರ್ಮ ಭಗಿನಿಯರು ಪ್ರಾರ್ಥನೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ದಾಳಿ ನಡೆಸಿದ್ದ 15 ಜನರ ತಂಡ ಏಕಾಏಕಿ ಕಿಟಕಿ ಗಾಜುಗಳನ್ನು ಪುಡಿ ಮಾಡಿ ದಾಂಧಲೆ ನಡೆಸಿದ್ದರು,ಇದೇ ಸಂದರ್ಭದಲ್ಲಿ ಕ್ರೈಸ್ತ ದೇವರ ಸೇಕ್ರಮೆಂಟ್ ಮತ್ತು ಏಸು ಕ್ರಿಸ್ತರ ಪವಿತ್ರವಾದ ಶಿಲುಬೆಯನ್ನು ಧ್ವಂಸಗೊಳಿಸಿದ್ದರು.

ಇದೇ ದಿನ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ಮತ್ತು ಉಡುಪಿ ಜಿಲ್ಲೆಗಳಲ್ಲೂ ಇಂಥಹುದೇ ದಾಳಿ ನಡೆದಿದ್ದುವು. ಈ ಎಲ್ಲಾ ದಾಳಿಗಳನ್ನು ಸಮರ್ಥಿಸಿದ್ದ ಅಂದಿನ ಭಜರಂಗದಳದ ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ದಾಳಿ ಸಮರ್ಥಿಸಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಹೇಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಜೆಎಂಎಫ್‍ಸಿ 2ನೇ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶ್ ಬಿ.ಟಿ. ವಿಚಾರಣೆ ನಡೆಸಿ ಮಹೇಂದ್ರ ಕುಮಾರನ್ನು ಆರೋಪ ಮುಕ್ತ ಗೊಳಿಸಿ ತೀರ್ಪು ನೀಡಿದ್ದಾರೆ.

ಈ ಪ್ರಕರಣದಲ್ಲಿ 10 ವರ್ಷಗಳ ಕಾಲ 12 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಸಾಕ್ಷಿಗಳ ಕೊರತೆಯಿಂದ ಆರೋಪಿಯಾಗಿದ್ದ ಮಹೇಂದ್ರ ಕುಮಾರ್ ದೋಷಮುಕ್ತರಾಗಿದ್ದಾರೆ.

ಈ ಪ್ರಕರಣದಲ್ಲಿ ಅಂದಿನ ಇನ್‍ಸ್ಪೆಕ್ಟರ್ ಎಚ್.ಎನ್.ವೆಂಕಟೇಶ್ ಪ್ರಸನ್ನ ಅವರು ಮಹೇಂದ್ರ ಕುಮಾರ್ ಅವರನ್ನು ಬಂಧಿಸಿಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಮಹೇಂದ್ರ ಕುಮಾರ್ ಪರವಾಗಿ ಪಿ.ಪಿ. ಹೆಗ್ಡೆ ಅಸೋಸಿಯೇಶನ್ ನ ವಕೀಲ ರಾಜೇಶ್ ಕುಮಾರ್ ಅಮ್ಟಾಡಿ ವಾದಿಸಿದ್ದರು. ಚರ್ಚ್ ಗಳ ಮೇಲೆ ದಾಳಿ ನಡೆಸಿದ ಪ್ರಕರಣಗಳು ವಿಚಾರಣೆಯಾಗಿ ಐದು ವರ್ಷಗಳ ಹಿಂದೆಯೇ ಉಳಿದ ಆರೋಪಿಗಳು ಆರೋಪ ಮುಕ್ತರಾಗಿದ್ದರು.

3 Shares

Facebook Comments

comments