DAKSHINA KANNADA
ಮಂಗಳೂರು: ವಾಹನ ತಪಾಸಣೆ ವೇಳೆ ಸಿಕ್ಕಿಬಿದ್ದ ಕಳ್ಳ
ಮಂಗಳೂರು, ಮೇ 20: ರಾಷ್ಟ್ರೀಯ ಹೆದ್ದಾರಿ 66ರ ಪಡೀಲ್ ಜಂಕ್ಷನ್ ನಲ್ಲಿ ಬುಧವಾರ ಮುಂಜಾನೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವಾಗ ಓರ್ವ ಕಳ್ಳ ಸಿಕ್ಕಿಬಿದ್ದು ಇನ್ನೋರ್ವ ಪರಾರಿಯಾದ ಘಟನೆ ಮೇ 19ರ ಬುಧವಾರ ನಡೆದಿದೆ.
ಕಂಕನಾಡಿ ನಗರ ಪೊಲೀಸ್ ಠಾಣಾ ಉಪನಿರೀಕ್ಷಕ ಸುಂದರ್ ರಾಜ್ ಅವರು ಸಿಬ್ಬಂದಿಯೊಂದಿಗೆ ಬ್ಯಾರಿಕೇಡ್ ಹಾಕಿ ಬುಧವಾರ ಮುಂಜಾನೆ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಇಬ್ಬರು ಐದು ಗಂಟೆ ವೇಳೆಗೆ ಕಣ್ಣೂರು ಕಡೆಯಿಂದ ಸ್ಕೂಟರ್ ನಲ್ಲಿ ಅತಿ ವೇಗವಾಗಿ ಬರುತ್ತಿದ್ದರು. ತಕ್ಷಣ ವಾಹನ ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಸ್ಖೂಟರ್ ಸವಾರರು ಪರಾರಿಯಾಗಲು ಯತ್ನಿಸಿದರು. ಆಗ ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ.
ಪೊಲೀಸರು ಅಲ್ಲಿಗೆ ಹೋಗುವಷ್ಟರಲ್ಲಿ ಬಿದ್ದಿದ್ದ ಸಹಸವಾರ ಅಲ್ಲಿಂದ ಓಡಿ ಹೋಗಿ ಅಲ್ಲೇ ಪಡೀಲ್ ರೇಷನ್ ಅಂಗಡಿ ಮುಂದೆ ನಿಲ್ಲಿಸಲಾಗಿದ್ದ ಸುಝುಕಿ ಎಕ್ಸೆಸ್ ವಾಹನದಲ್ಲಿ ಪರಾರಿಯಾಗಿದ್ದಾನೆ. ಪೋಲೀಸರು ಬಿದ್ದು ಗಾಯಗೊಂಡಿದ್ದಾತನನ್ನು ವಿಚಾರಿಸಿದಾಗ ಸಾದತ್ ಅಲಿ ಅಲಿಯಾಸ್ ಅನ್ಸಾರಿ ಎಂಬುದು ತಿಳಿದುಬಂದಿದೆ. ಅಲ್ಲದೆ ಆತನೊಂದಿಗೆ ಇದ್ದು ಪರಾರಿಯಾದ ಅಶ್ರಫ್ ಅಲಿ ಎಂದು ಗುರುತಿಸಲಾಗಿದೆ.
ಇವರಿಬ್ಬರು ವಿವಿಧೆಡೆ ಕಳ್ಳತನ ಮತ್ತು ಸುಲಿಗೆ ನಡೆಸಿರುವ ಆರೋಪಿಗಳಾಗಿದ್ದು ಬುಧವಾರ ಕಂಕನಾಡಿ ಜಂಕ್ಷನ್ ನಲ್ಲಿ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಬಳಿ ಮಲಗಿದ್ದ ಅಪರಿಚಿತ ವ್ಯಕ್ತಿಯ ಬಳಿಯಿಂದ ಮೊಬೈಲ್ ಹಾಗೂ ಪಡೀಲ್ ಬೈರಾಡಿ ಬಳಿ ಕಾಮಗಾರಿ ನಡೆಯುತ್ತಿದ್ದ ಕಟ್ಟಡದಲ್ಲಿದ್ದ ಹಿಂದಿ ಭಾಷಿಕ ಕೆಲಸಗಾರರ ನಗದು ಹಣ ಮತ್ತು ಅಂದಾಜು 4 ಮೊಬೈಲ್ ಗಳನ್ನು ಕಳ್ಳತನ ಮಾಡಿರುವುದು ತಿಳಿದುಬಂದಿದೆ. ಇನ್ನು ಇದೇ ಕೃತ್ಯಕ್ಕಾಗಿ ಬಳಸುತ್ತಿದ್ದ ಸ್ಕೂಟರನ್ನು ಮೇ 12ರಂದು ಕಂಕನಾಡಿ ಹಳೆ ರಸ್ತೆಯ ಅಪಾರ್ಟ್ಮೆಂಟ್ ಒಂದರ ಬಳಿ ಕಳ್ಳತನ ಮಾಡಿದ್ದು, ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ