Connect with us

    DAKSHINA KANNADA

    ಮಂಗಳೂರು :132 ಜಿಲ್ಲಾಧಿಕಾರಿಗಳನ್ನು ಕಂಡ ದಕ್ಷಿಣ ಕನ್ನಡದ ಹಳೆ ಡಿಸಿ ಕಚೇರಿ ಕಟ್ಟಡದಲ್ಲಿ ನ.30 ರಿಂದ ಪಾರಂಪರಿಕ ಸಪ್ತಾಹ..!

    ಮಂಗಳೂರು: ಸರಿ ಸುಮಾರು ಒಂದೂವರೆ ಶತಮಾನದ ಇತಿಹಾಸವುಳ್ಳ ಮಂಗಳೂರು ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡದ ಆವರಣದಲ್ಲಿ ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು  ಪಾರಂಪರಿಕ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ.

    ಬ್ರಿಟೀಷರ ಕಾಲದಲ್ಲಿ ಕಲೆಕ್ಟರ್ ಆಫೀಸ್ ಎಂದೇ ಕರೆಯಲ್ಪಡುತ್ತಿದ್ದ ಈ ಕಟ್ಟಡವು ಒಂದು ಕಾಲದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಹಿಂದಿನ ಕೆನರಾ ಜಿಲ್ಲೆಯ ಆಡಳಿತ ಕೇಂದ್ರಸ್ಥಾನವಾಗಿತ್ತು. ಸ್ವಾತಂತ್ರ್ಯಾಪೂರ್ವದಲ್ಲಿ ಬ್ರಿಟೀಷ್ ಅಧಿಕಾರಿಗಳಿಗೆ ಇದು ಕಚೇರಿಯಾಗಿತ್ತು. ನಂತರವೂ ಜಿಲ್ಲಾಧಿಕಾರಿ ಕಚೇರಿ ಇಲ್ಲಿಯೇ ಕಾರ್ಯಾಚರಿಸುತ್ತಿತ್ತು.

    1914 ರಿಂದ 1919 ರ ವರೆಗೆ ನಡೆದ ಒಂದನೇ ಮಹಾ ಯುದ್ದದಲ್ಲಿ ಇದೇ ಹಳ್ಳಿಯಿಂದ 88 ಮಂದಿ ಪಾಲ್ಗೊಂಡಿದ್ದು ಅವರಲ್ಲಿ ಇಬ್ಬರು ಹುತಾತ್ಮರಾಗಿದ್ದರು. ಅವರ ಗೌರವಾರ್ಥ ಬರೆದ ಲೇಖನ ಇ0ದಿಗೂ ಈ ಕಟ್ಟಡದ ಗೋಡೆಯ ಮೇಲೆ ಕಾಣಬಹುದು.  ಬಳಿಕ ಪಕ್ಕದಲ್ಲಿಯೇ ಹೊಸ ಕಟ್ಟಡವಾದ ಬಳಿಕ ಜಿಲ್ಲಾಧಿಕಾರಿ ಕಚೇರಿ ಅಲ್ಲಿಗೆ ಸ್ಥಳಾಂತರಗೊಂಡಿದ್ದರೂ, ಹಳೇ ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಇಂದಿಗೂ ಗಟ್ಟಿಮುಟ್ಟಾಗಿ ಸುಭದ್ರ ಸ್ಥಿತಿಯಲ್ಲಿರುವ ಈ ಕಟ್ಟಡವು ಜಿಲ್ಲೆಯ ಆಡಳಿತ ಕ್ಷೇತ್ರದ ಭವ್ಯ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ.
    ಇದುವರೆಗೆ 132 ಜಿಲ್ಲಾಧಿಕಾರಿಗಳನ್ನು ಕಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1799 ರಲ್ಲಿ ಬ್ರಿಟೀಷ್ ಅಧಿಕಾರಿ ಮೇಜರ್ ಮುನ್ರೋ ಅವರು ಪ್ರಥಮ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.1905 ರಲ್ಲಿ AHS ಬಹದ್ದೂರ್ ಅವರು ಅಧಿಕಾರ ವಹಿಸಿದ ಮೊದಲನೇ ಭಾರತೀಯ ಜಿಲ್ಲಾಧಿಕಾರಿಯಾಗಿದ್ದಾರೆ. M.ಸುಬ್ರಹ್ಮಣ್ಯ ಅವರು 1940 ರಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿದ ಮೊದಲ IAS ಅಧಿಕಾರಿಯಾಗಿದ್ದಾರೆ.
    ಈ ಕಟ್ಟಡದ  ಪಾರಂಪರಿಕ ಮತ್ತು ಭವ್ಯ ಇತಿಹಾಸವನ್ನು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೇ ಸ್ಥಳದಲ್ಲಿ ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ಪಾರಂಪರಿಕ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ.
    ನವೆಂಬರ್ 30 ರಂದು ಬೆಳಿಗ್ಗೆ 10 ರಿಂದ ಸರಕಾರಿ ಶಾಲೆಗಳ 3 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಯಾವುದೇ ಪಾರಂಪರಿಕ ಸ್ಮಾರಕಗಳನ್ನು ಈ ಸ್ಪರ್ಧೆಯಲ್ಲಿ ಬಿಡಿಸಬಹುದಾಗಿದೆ. ಅಂದು ಮಧ್ಯಾಹ್ನ 2 ರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಳೇ ಜಿಲ್ಲಾಧಿಕಾರಿ ಕಟ್ಟಡದ ಒಳ ಮತ್ತು ಹೊರ ಭಾಗದ ಆವರಣದ ಬಗ್ಗೆ ತಮ್ಮ ದೃಷ್ಟಿಕೋನದ ಕಲಾವಿನ್ಯಾಸ ಸ್ಪರ್ಧೆ ನಡೆಯಲಿದೆ. ಈ ಕಟ್ಟಡವನ್ನು ಇನ್ನಷ್ಟು ಆಕರ್ಷಿಸಲು ನವೀನ ವಿನ್ಯಾಸವನ್ನು ಸ್ಪರ್ಧಾಳುಗಳು ತಮ್ಮ ಕಲೆಯಲ್ಲಿ ಪ್ರದರ್ಶಿಸಬಹುದಾಗಿದೆ.
    ಬೆಳಿಗ್ಗೆ 11 ರಿಂದ 12 ಹಾಗೂ ಮಧ್ಯಾಹ್ನ 3 ರಿಂದ 4ರ ವರೆಗೆ ಪಾರಂಪರಿಕ ನಡಿಗೆ, ಸಂಜೆ 4:30 ರಿಂದ ಮುಕ್ತ ಸಂವಾದ ನಂತರ ಬಹುಮಾನ ವಿತರಣೆ, ಸಂಜೆ 6 ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಎರಡು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಪಾರಂಪರಿಕ ವಸ್ತು ಪ್ರದರ್ಶನ ನಡೆಯಲಿದೆ.
    ಮುಂದಿನ ದಿನಗಳಲ್ಲಿ ಈ ಪಾರಂಪರಿಕ ಕಟ್ಟಡದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು, ಪ್ರವಾಸೋದ್ಯಮ ಆಕರ್ಷಿಸುವ ನಿಟ್ಟಿನಲ್ಲಿ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
    Share Information
    Advertisement
    Click to comment

    Leave a Reply

    Your email address will not be published. Required fields are marked *