DAKSHINA KANNADA
ಮಂಗಳೂರು : ಕಂಟೈನರ್ ಲಾರಿಯಲ್ಲಿ ಸಾಗಿಸುತ್ತಿದ್ದ 200 ಕೆಜಿ ಗಾಂಜಾ ವಶ
ಮಂಗಳೂರು, ಮೇ 26: ಮೀನಿನ ಕಂಟೈನರ್ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 200 ಕೆಜಿ ಗಾಂಜಾವನ್ನು ಪತ್ತೆ ಹಚ್ಚಿರುವ ಉಳ್ಳಾಲ ಠಾಣಾ ಪೊಲೀಸರು, ನಾಲ್ಕು ಲಾಂಗ್ ಮತ್ತು ತಲವಾರು, ಒಂದು ಕಾರು, ಮೀನಿನ ಕಂಟೈನರ್ ಲಾರಿ, ವೈಫೈ ಸೆಟ್ಗಳು ಹಾಗೂ ನಾಲ್ಕು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡಿನ ಮೊಹಮ್ಮದ್ ಫಾರೂಕ್, ಕೊಡಗು, ಕುಶಾಲನಗರದ ಸೈಯ್ಯದ್ ಮೊಹಮ್ಮದ್, ಮಂಗಳೂರು ಮುಡಿಪುವಿನ ಮಹಮ್ಮದ್ ಅನ್ಸಾರ್ ಹಾಗೂ ಕಾಸರಗೋಡು, ಮಂಜೇಶ್ವರದ ಮೊಯಿನುದ್ದೀನ್ ನವಾಝ್ ಬಂಧಿತ ಆರೋಪಿಗಳು.
ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣ ಜಿಲ್ಲೆಯ ಟೂನಿ ಎಂಬಲ್ಲಿಂದ ಈ ಗಾಂಜಾ ಸರಬರಾಜು ಆಗಿದೆ. ಹಾಸನ ಮೂಲಕ ಈ ಗಾಂಜಾವನ್ನು ತರಲಾಗಿತ್ತು. ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಮಂಗಳೂರಿನ ಕೆ.ಸಿ.ರೋಡ್‌ನಲ್ಲಿನ ಒಲವಿನಹಳ್ಳಿ ಕ್ರಾಸ್ ಬಳಿ ವಾಹನವನ್ನು ಜಪ್ತಿ ಮಾಡಿದಾಗ 200 ಕೆಜಿ ಗಾಂಜಾ ಪತ್ತೆಯಾಗಿದೆ. ಈ ಗಾಂಜಾವನ್ನು ಮಂಗಳೂರು ಹಾಗೂ ಕಾಸರಗೋಡಿನಲ್ಲಿ ಮಾರಾಟ ಮಾಡಲು ತರಲಾಗಿತ್ತು.
ಈ ಬಗ್ಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಮಾತನಾಡಿ, ಇವರಲ್ಲಿ ಮೂವರ ಮೇಲೆ ಈಗಾಗಲೇ ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡಿರುವ ಆರೋಪದ ಮೇಲೆ ಎನ್‌ಡಿಪಿಎಸ್ ಪ್ರಕರಣ ದಾಖಲಾಗಿತ್ತು. 2012ರಿಂದಲೇ ಗಾಂಜಾ ವ್ಯವಹಾರದಲ್ಲಿ ಇವರು ತೊಡಗಿಸಿಕೊಂಡಿರುವುದು ತಿಳಿದು ಬಂದಿದೆ. ಇವರು ಬಹಳ ವ್ಯವಸ್ಥಿತವಾಗಿ ಗಾಂಜಾ ಸಾಗಾಟ ಮಾರಾಟದಲ್ಲಿ ತೊಡಗಿರುವ ಜಾಲವಾಗಿದ್ದು, ಇನ್ನು ಕೆಲವಾರು ಮಂದಿ ಈ ಜಾಲದಲ್ಲಿ ಇದ್ದಾರೆ ಎನ್ನುವುದು ತಿಳಿದು ಬಂದಿದೆ.
ಮಂಗಳೂರು, ಹಾಸನ ಹಾಗೂ ಕೊಡಗು ಭಾಗಗಳಲ್ಲಿ ಇವರು ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ. ಪತ್ತೆ ಕಾರ್ಯದಲ್ಲಿ ತೊಡಗಿದ್ದ ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿ ಸುದೀಪ್ ಹಾಗೂ ತಂಡಕ್ಕೆ 25ಸಾವಿರ ರೂ. ಬಹಮಾನ ನೀಡಲಾಗುತ್ತದೆ ಎಂದು ಹೇಳಿದರು.
You must be logged in to post a comment Login