Connect with us

LATEST NEWS

ಮಾಜಿ ಸಚಿವ ಯು.ಟಿ ಖಾದರ್‌ ಅವರ ಫಾಲೋ ಮಾಡಿದ ವ್ಯಕ್ತಿ ಪೊಲೀಸ್ ವಶಕ್ಕೆ

ಮಂಗಳೂರು ಡಿಸೆಂಬರ್ 24 : ನಿನ್ನೆ ಮಾಜಿ ಸಚಿವ ಯು.ಟಿ ಖಾದರ್‌ ಅವರ ಕಾರನ್ನು ಬೈಕ್‌ನಲ್ಲಿ ಫಾಲೋ ಮಾಡಿಕೊಂಡು ಬಂದ ವ್ಯಕ್ತಿಯೊಬ್ಬನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಯುವಕನನ್ನು ಬೋಳೂರು ನಿವಾಸಿ ಅನೀಶ್ ಪೂಜಾರಿ ಎಂದು ಗುರುತಿಸಲಾಗಿದೆ. ಬುಧವಾರ ಮಂಗಳೂರಿನ ದೇರಳಕಟ್ಟೆಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಭದ್ರತಾ ವಾಹನದ ಬೆಂಗಾವಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿದ ಅಪರಿಚಿತ ವ್ಯಕ್ತಿಯೋರ್ವ ಸುಮಾರು 15 ಕಿ.ಮೀ ಖಾದರ್‌ ಅವರ ವಾಹನವನ್ನು ಫಾಲೋ ಮಾಡಿದ್ದ. ಭದ್ರತಾ ವಾಹನದ ಸಿಬ್ಬಂದಿ ಎಚ್ಚರಿಕೆ ನೀಡಿದರೂ ಹೆಲ್ಮೆಟ್‌ದಾರಿ ಬೈಕ್ ಸವಾರ ಇದನ್ನು ಲೆಕ್ಕಿಸಿರಲಿಲ್ಲ. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಫಾಲೋ ಮಾಡಿಕೊಂಡು ಬಂದ ವ್ಯಕ್ತಿಯನ್ನು ಹಿಡಿಯಲು ಪೊಲೀಸರು ಪ್ರಯತ್ನ ಪಟ್ಟರೂ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.


ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸರು ಬುಧವಾರ ತಡರಾತ್ರಿ ಬೈಕ್‌ನಲ್ಲಿ ಫಾಲೋ ಮಾಡಿಕೊಂಡು ಬಂದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಯಾವುದೇ ಉದ್ದೇಶ ಇರಲಿಲ್ಲ ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಚಿವ ಯುಟಿ ಖಾದರ್‌ಗೆ ಕೊಲೆ ಬೆದರಿಕೆ ಇದೆ ಎಂದು ಈ ಹಿಂದೆ ಗುಪ್ತಚರ ಇಲಾಖೆ ವರದಿ ನೀಡಿತ್ತು. ಶಾಸಕ ತನ್ವೀರ್‌ ಸೇಠ್ ಮೇಲೆ ನಡೆದ ದಾಳಿಯ ಹಿನ್ನೆಲೆಯಲ್ಲಿ ಯುಟಿ ಖಾದರ್‌ಗೂ ಭದ್ರತೆಯನ್ನು ನೀಡಲಾಗಿತ್ತು. ಇದೀಗ ಭದ್ರತೆ ಇದ್ದರೂ ವ್ಯಕ್ತಿಯೊಬ್ಬ ಸುಮಾರು 15 ಕಿ.ಮೀ ಫಾಲೋ ಮಾಡಿಕೊಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪೊಲೀಸರು ಫಾಲೋ ಮಾಡಿದ ವ್ಯಕ್ತಿಗೆ ಯಾವುದೇ ಉದ್ದೇಶ ಇಲ್ಲ ಎಂದು ಹೇಳುತ್ತಿದ್ದರೂ ಬೆಂಗಾವಲು ವಾಹನದ ಸಿಬ್ಬಂದಿ ಎಚ್ಚರಿಕೆಯನ್ನು ಮೀರಿ ಫಾಲೋ ಮಾಡಲು ಕಾರಣ ಏನು ಎಂಬುವುದು ಕೂಡಾ ಕುತೂಹಲ ಕೆರಳಿಸಿದೆ.

Facebook Comments

comments