DAKSHINA KANNADA
ಅಪ್ರಾಪ್ತ ಪುತ್ರಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ ತಂದೆಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ಸುಳ್ಯ ಜೂನ್ 22: ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ ತಂದೆಗೆ ಪುತ್ತೂರು ಪೋಕ್ಸೋ ವಿಶೇಷ ನ್ಯಾಯಾಲಯ ಹಾಗೂ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಅಪರಾಧಿ ಸುಳ್ಯ ತಾಲೂಕಿನ ಎಣ್ಣೂರು ಗ್ರಾಮದ ನಾರಾಯಣ ನಾಯ್ಕ ಎಂಬುವನಾಗಿದ್ದು ಮೇ 24, 2015ರಂದು ಅಪ್ರಾಪ್ತ ವಯಸ್ಸಿನ ತನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ಮಗಳು ಬೊಬ್ಬೆ ಹಾಕಿದಾಗ ತಾಯಿಗೆ ಎಚ್ಚರವಾಗಿದ್ದು, ಈ ವೇಳೆ ಅಪರಾಧಿ ನಾರಾಯಣ ನಾಯ್ಕ ಹೆಂಡತಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದ. ಈ ಕುರಿತು ಬಾಲಕಿಯ ತಾಯಿ ಸುಬ್ರಹ್ಮಣ್ಯ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.
ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯ ಹಾಗೂ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅವರು ಅತ್ಯಾಚಾರ ಯತ್ನದ ಆರೋಪ ಸಾಬೀತಾದ ಹಿನ್ನೆಲೆ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದ್ದಲ್ಲಿ ಒಂದು ವರ್ಷ ಸಾದಾ ಶಿಕ್ಷೆ ವಿಧಿಸಲಾಗಿದೆ.
ದಂಡದ ಮೊತ್ತದಲ್ಲಿ 25,000ರೂ. ವನ್ನು ಸಂತ್ರಸ್ತ ಬಾಲಕಿಗೆ ನೀಡಲು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಬಾಲಕಿಗೆ ಪರಿಹಾರವಾಗಿ 1 ಲಕ್ಷ ರೂ. ನೀಡುವಂತೆ ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದೆ. ಸರ್ಕಾರದ ಪರವಾಗಿ ಪೋಕ್ಸ್ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.