ಹಳೆ ಲವ್ವರ್ ನ ಮೆಸೇಜ್ ನಂಬಿ 1 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಯುವಕ
02/03/2026
ಸಿದ್ದಾಪುರ ಮಾರ್ಚ್ 02: ಹಳೆ ಲವ್ವರ್ ಮತ್ತ ಮೆಸೇಜ್ ಮಾಡಿದ್ದಾಳೆ ಎಂದು ನಂಬಿ ಯುವಕನೊಬ್ಬ ಆಕೆ ಹೇಳಿದ ಯುಪಿಐ ಸ್ಕಾನ್ ಗಳಿಗೆ ಹಣ ಹಾಕಿ ಸುಮಾರು 1 ಲಕ್ಷದ 80 ಸಾವಿರ ಕಳೆದುಕೊಂಡ ವಿಚಿತ್ರ ಘಟನೆ ನಡೆದಿದೆ,ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ ಹೊಸಂಗಡಿ ಗ್ರಾಮದ ದಿವ್ಯ(28) ಎನ್ನುವ ಮಹಿಳೆ ಹೊಸಂಗಡಿ ಗ್ರಾಮದ ರವೀಂದ್ರ (29) ಎನ್ನುವ ವ್ಯಕ್ತಿಗೆ ಮೊಬೈಲ್ ವಾಟ್ಸ್ಅಪ್ ಮತ್ತು ಇನ್ಸ್ಟಾಗ್ರಾಂನಲ್ಲಿ ಚಾಟ್ ಮಾಡಿ, ಹಣ ಪಡೆದು ವಂಚಿಸಿದ್ದಾಳೆ
ಪ್ರಕರಣದ ಹಿನ್ನಲೆ
ಹೊಸನಗರ ತಾಲೂಕಿನ ಅನುಷಾ ಎನ್ನುವ ವಿದ್ಯಾರ್ಥಿನಿ 3 ವರ್ಷದ ಹಿಂದೆ ಹತ್ತಿರದ ಸಂಬಂಧಿ ಹೊಸಂಗಡಿ ಗ್ರಾಮದ ದಿವ್ಯ ಎನ್ನುವ ಮಹಿಳೆಯ ಮನೆಯಲ್ಲಿ ಇದ್ದುಕೊಂಡು ಓದುತ್ತಿದ್ದಳು. ಆ ಸಂದರ್ಭದಲ್ಲಿ ರವೀಂದ್ರನೊಂದಿಗೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿತು. ಆ ಸಂದರ್ಭದಲ್ಲಿ ಹೆತ್ತವರಿಗೆ ವಿಷಯ ತಿಳಿದು, ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇತ್ಯರ್ಥಗೊಂಡಿತು. ಆ ಸಂದರ್ಭದಲ್ಲಿ ಅನುಷಾ ಉಪಯೋಗಿಸುತ್ತಿದ್ದ ಮೊಬೈಲ್ ನಂಬರನ್ನು ದಿವ್ಯ ಉಪಯೋಗಿಸುತ್ತಿದ್ದರು.
2025ರ ಅ.24ರಂದು ಅನುಷಾ ಹೆಸರಿನಲ್ಲಿ ದಿವ್ಯ ರವೀಂದ್ರ ಅವರಿಗೆ ಮೆಸೇಜ್ ಮಾಡಿ, ಹುಟ್ಟುಹಬ್ಬದ ಶುಭಾಶಯಗಳು ಕೋರಿದಳು. ರವೀಂದ್ರ ಅವರು ತನ್ನ ಹಳೆ ಪ್ರೇಮಿ ಅನುಷಾ ಮೆಸೇಜ್ ಮಾಡಿದ್ದಾಳೆ ಎಂದು ತಿಳಿದು, ಚಾಟ್ ಮಾಡಲು ಶುರು ಮಾಡಿದರು. ದಿವ್ಯ ಅನುಷಾ ಹೆಸರಿನಲ್ಲಿ ಬೇರೆ ಬೇರೆ ಸ್ಕಾನರ್ಗಳನ್ನು ಕಳುಹಿಸಿ ಸುಮಾರು 1,80,200 ರೂ. ಹಣ ಹಾಕಿಸಿಕೊಂಡು ವಂಚಿಸಿದಳು. ವಂಚನೆಗೆ ಒಳಗಾಗಿದನ್ನು ಅರಿತ ರವೀಂದ್ರ ಅವರು ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ನೀಡಿದರು.