LATEST NEWS
ಕುಡಿಯದೇ ಟೈಟ್ ಆಗುತ್ತಾನೆ ಈ ಮನುಷ್ಯ!
ಇಂಗ್ಲೆಂಡ್, ಜನವರಿ 14: ಕೆಲವರಿಗೆ ಎಷ್ಟೇ ಕುಡಿದು ಮತ್ತೇರುವುದಿಲ್ಲ, ಕೆಲವರು ಆಲ್ಕೋಹಾಲ್ನ ಘಾಟಿಗೇ ಮತ್ತೇರುವವರೂ ಇರಬಹುದು. ಆದರೆ ಈ ಮನುಷ್ಯ ಅವರಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾನೆ. ಈತ ಕುಡಿಯದೇ ಇದ್ದರೂ ಟೈಟಾಗಿ ಬಿಡುತ್ತಾನೆ.
ಇದನ್ನು ಕೇಳುತ್ತಿದ್ದಂತೆ ಕೆಲ ಮದ್ಯಪ್ರಿಯರು ನಮಗಾದರೂ ಹಾಗಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಖುಷಿ ಪಡಬಹುದೇನೋ?! ಇದು ಒಂಥರ ವರವೋ ಶಾಪವೋ ಎಂದು ನಿರ್ಧರಿಸಲಾಗದ ಪರಿಸ್ಥಿತಿ. ಆದರೆ ಇದು ಈತನಿಗೆ ಕಾಯಿಲೆ ಎಂಬುದಂತೂ ಸತ್ಯ. ಆಟೋ ಬ್ರಿವರಿ ಸಿಂಡ್ರೋಮ್ (ಎಬಿಎಸ್) ಎಂಬ ಈ ಅತ್ಯಪರೂಪದ ಕಾಯಿಲೆಯೇ ಇದಕ್ಕೆ ಕಾರಣ. ಸಫೋಕ್ನ ಲೋವೆಸ್ಟಾಫ್ಟ್ನಲ್ಲಿನ ನಿಕ್ ಕಾರ್ಸನ್ ಎಂಬ 62 ವರ್ಷದ ಈ ವ್ಯಕ್ತಿಗೆ 2003ರಲ್ಲೇ ಈ ಕಾಯಿಲೆ ಕಾಣಿಸಿಕೊಂಡಿತ್ತು.
ಅದರಲ್ಲೂ ಈತ ಕೇಕ್ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಮದ್ಯಪಾನ ಮಾಡಿದವರಷ್ಟೇ ಮತ್ತೇರಿದ ವ್ಯಕ್ತಿಯಾಗಿ ಬಿಡುತ್ತಾನೆ. ಇದಕ್ಕೆಲ್ಲ ಈತನ ದೇಹದಲ್ಲಿರುವ ಕಾರ್ಬೋಹೈಡ್ರೇಟ್ಸ್ ಹುದುಗಿ ಆಲ್ಕೋಹಾಲ್ ಆಗಿ ಪರಿವರ್ತನೆ ಆಗುತ್ತಿರುವುದೇ ಕಾರಣ. ಈತ ಸುಮಾರು 20 ವರ್ಷಗಳ ಕಾಲ ರಾಸಾಯನಿಕಗಳಿಗೆ ತನ್ನನ್ನು ತೆರೆದುಕೊಂಡು ಕೆಲಸ ಮಾಡಿದ್ದೇ ಇಂಥದ್ದೊಂದು ಕಾಯಿಲೆ ಕಾಣಿಸಿಕೊಳ್ಳಲು ಕಾರಣ ಎಂದು ಅಂದಾಜಿಸಲಾಗಿದೆ.
ನಿಕ್ ಕಾರ್ಸನ್ ಹೇಳೋದು ಹೀಗೆ “ಇದು ನನಗೆ ಬೇಡದಿದ್ದರೂ ನನ್ನನ್ನು ಪಾನಮತ್ತನಂತಾಗಿಸಿ ಬಿಡುತ್ತಿದೆ. ಸ್ವಲ್ಪೇ ಸ್ವಲ್ಪ ಸಕ್ಕರೆ ಅಥವಾ ಕಾರ್ಬೋಹೈಡ್ರೇಟ್ಸ್ ದೇಹದೊಳಗೆ ಹೋದರೂ ನನಗೆ ಮತ್ತೇರಿ, ಮದ್ಯಪಾನಿಯಂತಾಗಿ ಬಿಡುತ್ತೇನೆ. ಈ ಸಂದರ್ಭದಲ್ಲಿ ನಾನೇನು ಮಾಡಿದ್ದೆ ಎಂಬುದು ಕೂಡ ನನಗೆ ಎಷ್ಟೋ ಬಾರಿ ನೆನಪಿನಲ್ಲಿ ಉಳಿಯುವುದಿಲ್ಲ. ನನ್ನ ಪತ್ನಿ ನಾನು ಇಂಥ ಪರಿಸ್ಥಿತಿಯಲ್ಲಿದ್ದಾಗ ವಿಡಿಯೋ ಮಾಡಿಕೊಂಡು ಬಳಿಕ ನನಗೆ ತೋರಿಸಿದ್ದಾಳೆ. ಈ ಥರ ಆಗದಂತೆ ನೋಡಿಕೊಳ್ಳಲು ನಾನು ತುಂಬ ಪಥ್ಯ ಅನುಸರಿಸಬೇಕಾಗಿದೆ. ಇತ್ತೀಚೆಗೆ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬುದನ್ನು ನಾನು ತಿಳಿದುಕೊಂಡು ತೀರಾ ಸಮಸ್ಯೆ ಆಗುವುದನ್ನು ತಪ್ಪಿಸಿಕೊಳ್ಳುತ್ತಿದ್ದೇನೆ” ಎಂದು ನಿಕ್ ತಮ್ಮ ಸಂಕಷ್ಟ ಹೇಳಿಕೊಂಡಿದ್ದಾರೆ.