ಕೊಪ್ಪಳ, ಏಪ್ರಿಲ್ 07 : ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕಬ್ಬರಗಿಯ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯು ಮಂಗಳವಾರ ಅತ್ಯಂತ ವೈಭವದಿಂದ ಜರುಗಿತು. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಸಂಭ್ರಮದಲ್ಲಿ ಈ ಬಾರಿ ವಿಶೇಷ ಆಕರ್ಷಣೆಯಾಗಿದ್ದು 120 ಅಡಿ ಎತ್ತರದ ‘ಹಾಲುಗಂಭ’ ಏರುವ ಸಾಹಸ ಪ್ರಕ್ರಿಯೆ.

ಮನ್ನೇರಾಳ ಗ್ರಾಮದ ನಿವಾಸಿ, 62 ವರ್ಷದ ಶರಣಪ್ಪ ಗೊಲ್ಲರ ಅವರು ಎಣ್ಣೆ ಮತ್ತು ತುಪ್ಪ ಸವರಿ ಜಾರುತ್ತಿದ್ದ ಬೃಹತ್ ಕಂಬವನ್ನು ಅತ್ಯಂತ ಲೀಲಾಜಾಲವಾಗಿ ಏರುವ ಮೂಲಕ ನೆರೆದಿದ್ದ ಸಾವಿರಾರು ಭಕ್ತರ ಉದ್ಗಾರಕ್ಕೆ ಕಾರಣರಾದರು. ಕಂಬದ ಮೇಲಿಂದ ಸತತವಾಗಿ ಎಣ್ಣೆ ಬಿಡುತ್ತಿದ್ದರೂ, ಯಾವುದನ್ನೂ ಲೆಕ್ಕಿಸದೆ ಹತ್ತಿದ ಶರಣಪ್ಪ ಅವರು ತುದಿಯಲ್ಲಿದ್ದ ಕೊಬ್ಬರಿ ಮತ್ತು ಉತ್ತತ್ತಿಯನ್ನು ತಂದು ದೇವಿಗೆ ಅರ್ಪಿಸಿದರು.
ಯಾದವ ಸಮಾಜದವರು ತಂಡೋಪತಂಡವಾಗಿ ಭಾಗವಹಿಸುವ ಈ ಆಚರಣೆಯು ಕೃಷ್ಣನ ವಂಶಸ್ಥರ ಶೌರ್ಯ ಮತ್ತು ಭಕ್ತಿಯ ಸಂಕೇತವೆಂದು ನಂಬಲಾಗಿದೆ. ಜಾರುವ ಕಂಬದ ಮೇಲೆ ಹಿಡಿತ ಸಾಧಿಸುವುದು ಯುವಕರಿಗೇ ಅಸಾಧ್ಯವಾದ ಮಾತು. ಅಂತಹದರಲ್ಲಿ 60ರ ಹರೆಯದ ಹಿರಿಯರು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಈ ಸಾಹಸ ಮೆರೆದಿರುವುದು ವಿಸ್ಮಯ ಮೂಡಿಸಿದೆ. ಶರಣಪ್ಪ ಅವರು ಕಂಬ ಏರುತ್ತಿರುವ ದೃಶ್ಯಗಳನ್ನು ಭಕ್ತರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ‘ಟ್ರೆಂಡಿಂಗ್’ ಆಗಿದೆ. ನೆಟ್ಟಿಗರು ಇವರನ್ನು “ಕರ್ನಾಟಕದ ರಿಯಲ್ ಬಾಹುಬಲಿ” ಎಂದು ಬಣ್ಣಿಸುತ್ತಿದ್ದಾರೆ. ಶರಣಪ್ಪ ಅವರ ದೈಹಿಕ ದೃಢತೆ ಮತ್ತು ಅಚಲ ಭಕ್ತಿಗೆ ಸಾರ್ವಜನಿಕ ವಲಯದಲ್ಲಿ ಶಹಬ್ಬಾಸ್ ಗಿರಿ ವ್ಯಕ್ತವಾಗುತ್ತಿದೆ. ಜಾತ್ರೆಯ ಅಂಗವಾಗಿ ಗ್ರಾಮದಲ್ಲಿ ಸಡಗರ ಮನೆಮಾಡಿದ್ದು, ಸಾಹಸ ಮೆರೆದ ಶರಣಪ್ಪ ಅವರಿಗೆ ಸ್ಥಳೀಯ ಗ್ರಾಮಸ್ಥರು ಮತ್ತು ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿದರು.