ಭೋಪಾಲ್ ಜನವರಿ 16: ಪತ್ನಿಯ ಶೀಲ ಶಂಕಿಸಿ ಪಾಪಿ ಪತಿಯೋರ್ವ ಮಗುವಿಗೆ ಎದೆಹಾಲುಣಿಸುತ್ತಿದ್ದ ಪತ್ನಿ ಮೇಲೆ ಹಲ್ಲೆ ಮಾಡಿ ಕೊಂದು ಹಾಕಿದ್ದು, ಈ ವೇಳೆ ಉಸಿರುಗಟ್ಟಿ 6 ತಿಂಗಳ ಮಗು ಕೂಡ ಧಾರುಣ ಸಾವನ್ನಪ್ಪಿರುವ ಘಟನೆ ಮಧ್ಯ ಪ್ರದೇಶದಲ್ಲಿ ವರದಿಯಾಗಿದೆ.

ಮಧ್ಯಪ್ರದೇಶದ ಖಾರ್ಗೋನೆಯ ಬೇಡ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ಕೊಲೆ ಪ್ರಕರಣ ನಡೆದಿದ್ದು, ಮಗುವಿಗೆ ಎದೆಹಾಲುಣಿಸುತ್ತಿದ್ದ ಪತ್ನಿ ಮೇಲೆ ಪತಿ ಹಲ್ಲೆ ನಡೆಸಿದ ಪರಿಣಾಮ ಆಕೆ ಎಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ವೇಳೆ ಎದೆಹಾಲು ಕುಡಿಯುವ ವೇಳೆ ಮಗುವಿಗೆ ಉಸಿರುಗಟ್ಟಿ ಮಗು ಮೃತಪಟ್ಟಿದೆ.
ಪೊಲೀಸ್ ಮೂಲಗಳ ಪ್ರಕಾರ ಗುರುವಾರ ಬೆಳಗ್ಗೆ ಚಂಪಾಬಾಯಿ ಮಾನ್ಕರ್ ಮತ್ತು ಅವರ ಶಿಶು ಶವಗಳು ಮನೆಯಲ್ಲಿ ಪತ್ತೆಯಾಗಿತ್ತು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದ ವೇಳೆ ಮಹಿಳೆಯ ಪತಿ ಸುನಿಲ್ ಶವಗಳ ಬಳಿ ಕುಳಿತಿರುವುದು ಕಂಡುಬಂದಿದ್ದು, ಅನುಮಾನದ ಮೇಲೆ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಚಂಪಾಬಾಯಿಯ ದೇಹದ ಮೇಲೆ ಹಲವು ಗಾಯದ ಗುರುತುಗಳು ಕಂಡುಬಂದಿವೆ.
ವಿಚಾರಣೆಯ ಸಮಯದಲ್ಲಿ, ಸುನಿಲ್ ತನ್ನ ಹೆಂಡತಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಪತ್ನಿ ಶೀಲದ ಮೇಲೆ ಪತಿ ಸುನಿಲ್ ಗೆ ಶಂಕೆ ಇತ್ತು. ಆಕೆ ಪರಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ್ದ. ಇದೇ ವಿಚಾರವಾಗಿ ಪದೇ ಪದೇ ಜಗಳ ಮಾಡುತ್ತಿದ್ದ. ಬುಧವಾರ ರಾತ್ರಿ ಜಗಳ ತಾರಕಕ್ಕೇರಿದ್ದು, ಪತ್ನಿ ಮೇಲೆ ತೀವ್ರ ಹಲ್ಲೆ ಮಾಡಿ ಕೊಂದು ಹಾಕಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.
ಬುಧವಾರ ರಾತ್ರಿ ದಂಪತಿ ನಡುವೆ ಜಗಳವಾಗಿತ್ತು. ಈ ಜಗಳದಲ್ಲಿ, ಚಂಪಾಬಾಯಿ ತಮ್ಮ ಮಗುವಿಗೆ ಹಾಲುಣಿಸುತ್ತಿದ್ದಾಗ ಸುನಿಲ್ ಆಕೆಯ ಮೇಲೆ ಹಲ್ಲೆ ನಡೆಸಿ, ಬಾಗಿಲಿಗೆ ತಳ್ಳಿ, ಕೈ, ಕಾಲಿನ ಮೇಲೆ ಕೋಲಿನಿಂದ ಹೊಡೆದಿದ್ದಾನೆ. ಆಕೆ ಮೂರ್ಛೆ ಹೋಗಿದ್ದಾಳೆಂದು ನಂಬಿ ಆರೋಪಿ ನಿದ್ರೆಗೆ ಜಾರಿದ್ದ. ಅವರ ಇಬ್ಬರು ಮಕ್ಕಳು ಈ ಘಟನೆಯನ್ನು ಕಣ್ಣಾರೆ ಕಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.