ಉಡುಪಿ ಫೆಬ್ರವರಿ 23: ಯುವಕನೊಬ್ಬ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿಯ ಜನನಿಬಿಡ ಪ್ರದೇಶವಾದ ಕಲ್ಸಂಕ ವೃತ್ತದ ಬಳಿ ಸಂಭವಿಸಿದೆ. ಯುವಕನನ್ನು ಪೊಲೀಸರು ಮತ್ತು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಗದಗ ಮೂಲದವನೆಂದು ಗುರುತಿಸಲಾಗಿದೆ. ಆತ ಪಾನಮತ್ತನಾಗಿದ್ದನೋ ಅಥವಾ ಮಾನಸಿಕ ಅಸ್ವಸ್ಥನೋ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ಬಾಟಲಿಯಲ್ಲಿ ಪೆಟ್ರೋಲ್ ಹಿಡಿದು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ, ಕಲ್ಸಂಕ ವೃತ್ತದ ಬಳಿ ಕಿರುಚಾಡುತ್ತಾ ಮೈಮೇಲೆ ಪೆಟ್ರೋಲ್ ಸುರಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲಿಯೇ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ಆತನ ಕೈಯಲ್ಲಿದ್ದ ಬಾಟಲಿಯನ್ನು ಕಸಿದುಕೊಳ್ಳಲು ಯತ್ನಿಸಿದಾಗ, ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾನೆ. ಒಮ್ಮೆ ಬಾಟಲಿ ಕಸಿದುಕೊಂಡರೂ, ಮತ್ತೆ ಪೆಟ್ರೋಲ್ ತಂದು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಹಂತಕ್ಕೆ ತಲುಪಿದ್ದನು.
ತಕ್ಷಣವೇ ಕಾರ್ಯಪ್ರವೃತ್ತರಾದ ನಗರ ಪೊಲೀಸ್ ಠಾಣೆಯ ಎಸ್ಐಗಳಾದ ನಾರಾಯಣ ಮತ್ತು ಗಂಗಪ್ಪ ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು, ಆತನನ್ನು ಹಿಡಿದು ತಡೆದಿದ್ದಾರೆ. ಇದರಿಂದಾಗಿ ಸಂಭವನೀಯ ಭೀಕರ ದುರಂತವೊಂದು ತಪ್ಪಿದಂತಾಗಿದೆ.