ಆಂಧ್ರಪ್ರದೇಶ, ಮಾರ್ಚ್ 13: ಕೌಟುಂಬಿಕ ಕಲಹದಿಂದ ಬೇಸರಗೊಂಡ ಮಹಿಳೆಯೊಬ್ಬಳು ಪತಿಯ ಕಣ್ಣೆದುರಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬೋಯಿನಪಲ್ಲಿ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಕೃಷ್ಣವೇಣಿ ಎಂದು ಗುರುತಿಸಲಾಗಿದೆ. ಕುಟುಂಬದ ಒಳಜಗಳದಿಂದ ನೊಂದಿದ್ದ ಕೃಷ್ಣವೇಣಿ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ. ಘಟನೆಯ ವೇಳೆ ಪತಿ ಶ್ರೀರಾಮ್ ಶ್ರೀನಿವಾಸ್ ಪತ್ನಿಯನ್ನು ತಡೆಯಲು ಪ್ರಯತ್ನಿಸುವ ಬದಲು, ಮೊಬೈಲ್ನಲ್ಲಿ ಘಟನೆಯ ವೀಡಿಯೋವನ್ನು ರೆಕಾರ್ಡ್ ಮಾಡುತ್ತಿದ್ದನು ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, “ಹೀಗೆ ಕುಣಿಕೆ ಕಟ್ಟಬಾರದು, ಹೀಗೆ ಮಾಡಬೇಕು” ಎಂದು ಸೂಚನೆ ನೀಡಿದ್ದಾನೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಆರಂಭದಲ್ಲಿ ಪತ್ನಿ ತಮಾಷೆ ಮಾಡುತ್ತಿದ್ದಾಳೆ ಎಂದು ಭಾವಿಸಿದ್ದರಿಂದ, ಪತಿ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತಿಳಿದುಬಂದಿದೆ. ಆದರೆ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಹದಗೆಟ್ಟು, ಕೃಷ್ಣವೇಣಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪತಿ ಶ್ರೀರಾಮ್ ಶ್ರೀನಿವಾಸ್ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಬಂಧಿತ ಆರೋಪಿ ವೃತ್ತಿಯಿಂದ ಲೋಕೋ ಪೈಲಟ್ ಆಗಿ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದೆ.