ಕೊಚ್ಚಿ, ಏಪ್ರಿಲ್ 01: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ಕೇರಳ ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷ ರಂಜಿತ್ ಅವರನ್ನು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಬಂಧಿಸಿದೆ. ನಟಿಯೊಬ್ಬರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೇ ಚಿತ್ರರಂಗದ ಹಲವು ಗಣ್ಯರ ವಿರುದ್ಧ ಕಿರುಕುಳದ ದೂರುಗಳು ಕೇಳಿಬಂದಿದ್ದವು. ಈ ಪೈಕಿ, 2009ರಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಬಂಗಾಳಿ ನಟಿಯೊಬ್ಬರು ರಂಜಿತ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಸಿನಿಮಾ ಆಡಿಷನ್ ನೆಪದಲ್ಲಿ ತಮಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಅವರು ದೂರಿದ್ದರು. ಈ ಬೆನ್ನಲ್ಲೇ ಮತ್ತೊಬ್ಬ ಯುವ ನಟಿ ಕೂಡ ರಂಜಿತ್ ವಿರುದ್ಧ ದೂರು ದಾಖಲಿಸಿದ್ದರು.
ಬಂಧನ ಭೀತಿಯಿಂದ ರಂಜಿತ್ ಅವರು ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಇಡುಕ್ಕಿ ಜಿಲ್ಲೆಯ ತೊಡುಪುಳ ಬಳಿ ಕಾರ್ಯಾಚರಣೆ ನಡೆಸಿದರು. ರಸ್ತೆಯಲ್ಲೇ ಅವರ ವಾಹನವನ್ನು ತಡೆದ ಪೊಲೀಸರು, ತೀವ್ರ ವಿಚಾರಣೆಯ ನಂತರ ಅವರನ್ನು ವಶಕ್ಕೆ ಪಡೆದರು. ಬಂಧನದ ಸಮಯದಲ್ಲಿ ರಂಜಿತ್ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ, ಅವರನ್ನು ತಕ್ಷಣವೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.
ತನಿಖಾ ತಂಡವು ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಏಪ್ರಿಲ್ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿಗೆ ಸ್ಥಳಾಂತರಿಸಲಾಗಿದೆ. ಆರೋಪಿಯು ಹೈಕೋರ್ಟ್ನಲ್ಲಿ ಜಾಮೀನು ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.