ಬೆಂಗಳೂರು, ಮಾರ್ಚ್ 31: ಸಿಲಿಕಾನ್ ಸಿಟಿಯಲ್ಲಿ ಬಟ್ಟೆ ವ್ಯಾಪಾರದ ಮುಖವಾಡ ಧರಿಸಿ ಅಂತರಾಷ್ಟ್ರೀಯ ಮಟ್ಟದ ಮಾದಕ ವಸ್ತು ಜಾಲ ನಡೆಸುತ್ತಿದ್ದ ನೈಜೀರಿಯಾ ಮೂಲದ ಪ್ರಜೆಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಅಂದಾಜು 2 ಕೋಟಿ ರೂಪಾಯಿ ಮೌಲ್ಯದ 2 ಕೆಜಿ MDMA ಕ್ರಿಸ್ಟಲ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಯನ್ನು ನೈಜೀರಿಯಾ ಮೂಲದ ಸ್ಯಾಮುಯೆಲ್ ಇಕ್ಕೆನಾ ಎಂದು ಗುರುತಿಸಲಾಗಿದೆ. ಈತ 2012ರಲ್ಲಿ ಬಿಸಿನೆಸ್ ವೀಸಾದಡಿ ಭಾರತಕ್ಕೆ ಆಗಮಿಸಿದ್ದನು. ಆರಂಭದಲ್ಲಿ ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಈತ, ಕಳೆದ ವರ್ಷವಷ್ಟೇ ಬೆಂಗಳೂರಿಗೆ ತನ್ನ ವಾಸ್ತವ್ಯವನ್ನು ಬದಲಿಸಿದ್ದನು.
ಬಟ್ಟೆ ವ್ಯಾಪಾರವು ಕೇವಲ ಒಂದು ನೆಪವಾಗಿದ್ದು, ಇದರ ಮರೆಯಲ್ಲಿ ಸ್ಯಾಮುಯೆಲ್ ಬೃಹತ್ ಮಾದಕ ವಸ್ತು ಜಾಲವನ್ನು ಹೊಂದಿದ್ದನು. ಬನ್ನೇರುಘಟ್ಟದ ಬಳಿ ಕೇವಲ 50 ಸಾವಿರ ರೂಪಾಯಿಗೆ ಡ್ರಗ್ಸ್ ಖರೀದಿಸುತ್ತಿದ್ದ ಈತ, ಅದನ್ನು ನಗರದ ವಿವಿಧ ಭಾಗಗಳ ಗ್ರಾಹಕರಿಗೆ ಅತ್ಯಂತ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಸದ್ಯ ಯಲಹಂಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎನ್ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಹಿಂದೆ ಇರುವ ಇತರ ಜಾಲಗಳು ಹಾಗೂ ಈತನಿಗೆ ಡ್ರಗ್ಸ್ ಪೂರೈಸುತ್ತಿದ್ದ ಮೂಲಗಳ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.