ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ದನಕಳ್ಳತನದ ಪ್ರಮುಖ ಆರೋಪಿ ಅಂದರ್

ಮಂಗಳೂರು ಜುಲೈ 12: ದಕ್ಷಿಣಕನ್ನಡ ಜಿಲ್ಲೆಯ ಉಜಿರೆಯಲ್ಲಿ ಪತ್ತೆಯಾಗಿದ್ದ ಐಷಾರಾಮಿ ಕಾರಿನಲ್ಲಿ ಅಕ್ರಮ ದನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಬಶೀರ್ ಯಾನೆ ಆರ್ಗಾ ಬಶೀರ್ ಎಂದು ಗುರುತಿಸಲಾಗಿದೆ.ಈತ ದನ ಕಳ್ಳತನವನ್ನೇ ತನ್ನ ಮೂಲ ಕಸುಬನ್ನಾಗಿಸಿಕೊಂಡಿದ್ದು ಈತನ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿದ್ದು ಉಜಿರೆಯ ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ಎಂದು ಹೇಳಲಾಗಿದೆ.

ಸುರತ್ಕಲ್ ಕೃಷ್ಣಾಪುರ ನೈತಂಗಡಿಯಲ್ಲಿ ಮನೆಯಿಂದ ದನ ಕಳ್ಳತನ ಮಾಡಿದ್ದ ಆರೋಪವೂ ಸೇರಿ ದಕ್ಷಿಣ ಕನ್ನಡ , ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈ ಎಲ್ಲಾ ಪ್ರಕರಣಗಳಲ್ಲಿ ಪೊಲಿಸರಿಗೆ ಬೇಕಾಗಿದ್ದ.

ಅಲ್ಲದೆ ಕೆಲ ಸಮಯದ ಹಿಂದೆ ಬಶೀರ್‌ನನ್ನು ಪೊಲೀಸರು ದನಗಳ್ಳತನ ಪ್ರಕರಣವೊಂದರಲ್ಲಿ ಬಂಧಿಸಿದ್ದರು ಆದರೆ ಜಾಮೀನು ಪಡೆದ ಬಶೀರ್ ದನ ಕಳ್ಳತನದ ಕೃತ್ಯವನ್ನು ಮತ್ತೆ ಮುಂದುವರೆಸಿದ್ದ. ದನಕಳ್ಳತನ ಸಂಬಂಧಪಟ್ಟಂತೆ ಆತನ ಸಹಚರರರನ್ನು ಪೊಲೀಸರು ಬಂಧಿಸಿದ್ದರು. ಆದರೆ ಪ್ರಮುಖ ಆರೋಪಿ ಬಶೀರ್ ತಲೆ ಮರೆಸಿಕೊಂಡಿದ್ದ.

ಕೆಲ ದಿನಗಳ ಹಿಂದೆ ಉಜಿರೆಯಲ್ಲಿ ದನಗಳನ್ನು ಕಳ್ಳತನಮಾಡಿ ಸಾಗಿಸುತ್ತಿದ್ದಾಗ ವಾಹನ ಪಲ್ಟಿಯಾಗಿದ್ದು ಕಾರಿನಲ್ಲಿದ್ದ ದನಗಳೆಲ್ಲ ಸತ್ತು ಬಿದ್ದಿದ್ದವು. ಈ ವಾಹನ ಬಶೀರ್ ಚಲಾಯಿಸಿದ್ದ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಕಾರ್ಯಾಚರಣೆ ನಡೆಸಿದ ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆ ದಳ ಬಶೀರ್ ಯಾನೆ ಆರ್ಗಾ ಬಶೀರ್ ನನ್ನು ಮೂಡಬಿದ್ರೆಯ ತೋಡಾರ್ ಬಳಿ ಬಂಧಿಸಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

Facebook Comments

comments