ಕಲ್ಲಂದಡ್ಕ ಶೂಟೌಟ್ ಪ್ರಕರಣ ಪ್ರಮುಖ ಆರೋಪಿ ಬ್ಲೇಡ್ ಸಾಧಿಕ್‌ ಆರೆಸ್ಟ್

ಪುತ್ತೂರು ನವೆಂಬರ್ 30: ಕಲ್ಲು ಕೋರೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಕಬಕ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ಉದ್ಯಮಿ ಅಬ್ದುಲ್ ಖಾದರ್ ಮೇಲೆ ನಡೆದ ಶೂಟೌಟ್ ಪ್ರಕರಣದ ಪ್ರಮುಖ ಆರೋಪಿ ರೌಡಿ ಬ್ಲೇಡ್ ಸಾಧಿಕ್‌ನ್ನು ಬಂಧಿಸುವಲ್ಲಿ ದ.ಕ ಪೊಲೀಸರು ಯಶಸ್ವಿಯಾಗಿದ್ದಾರೆ.

ನವೆಂಬರ್ 28 ರಂದು ಪುತ್ತೂರಿನ ಕಲ್ಲಂದಡ್ಕ ಎಂಬಲ್ಲಿ ಕಾರಿನಲ್ಲಿ ಆಗಮಿಸಿದ ರೌಡಿ ಬ್ಲೇಡ್ ಸಾಧಿಕ್ ಸಹಿತ 5 ಜನರ ರೌಡಿಗಳು ಉದ್ಯಮಿ ಖಾದರ್ ಮೇಲೆ ಏಕಾ ಏಕಿ ಎದೆಗೆ ಗುಂಡು ಹಾರಿಸಿ ಪರಾರಿಯಾಗಿದ್ದರು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ದಕ್ಷಿಣಕನ್ನಡ ಪೊಲೀಸರು ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಪಹರೆ ಏರ್ಪಡಿಸಿ ಯಾವುದೇ ಆರೋಪಿಗಳು ಜಿಲ್ಲೆ ಬಿಟ್ಟು ತೆರಳದಂತೆ ಬಂದೋಬಸ್ತ್ ನಡೆಸಿದ್ದರು. ಈ ಹಿನ್ನಲೆಯಲ್ಲಿ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಜೋಗಿ ಎಂಬಾತ ಜಿಲ್ಲೆ ಬಿಟ್ಟು ತೆರಳುವ ಸಂದರ್ಭ ಗುಂಡ್ಯದ ಚೆಕ್‌ಪೋಸ್ಟ್ ಬಳಿ ಬಂಧಿಸಿದ್ದರು.

ಈಗ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರೌಡಿ ಬ್ಲೇಡ್ ಸಾಧಿಕ್‌ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಬ್ಲೇಡ್ ಸಾದಿಕ್ ವಿರುದ್ಧ 12ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಗೂಂಡಾ ಕಾಯಿದೆಯಡಿ ಈ ಹಿಂದೆ ಬ್ಲೇಡ್ ಸಾದಿಕ್ ಬಂಧಿತನಾಗಿದ್ದ. ಗಾಯಾಳು ಖಾದರ್ ಇನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.