ಪುತ್ತೂರು ಡಿಸೆಂಬರ್ 08: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಚಾರಣೆ ಇಂದು ಪುತ್ತೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದಿದೆ.


ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರಿಗೆ ಸಂಬಂಧಿಸಿದಂತೆ ಪುತ್ತೂರು ಸಹಾಯಕ ಆಯುಕ್ತರು ಇಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರು. ಅದರಂತೆ ಇಂದು ತಮ್ಮ ವಕೀಲರ ಜೊತೆ ಮಹೇಶ್ ಶೆಟ್ಟಿ ತಿಮರೋಡಿ ಪುತ್ತೂರು ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸಿದ್ದರು. ವಿಚಾರಣೆ ಮುಕ್ತಾಯದ ಬಳಿಕ ಮಾಧ್ಯಮಗಳಿಗೆ ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲರು ಮಾಹಿತಿ ನೀಡಿದ್ದು, ಡಿಸೆಂಬರ್ 11 ಕ್ಕೆ ಆಕ್ಷೇಪಣೆ ಸಲ್ಲಿಸಲು ತಿಮರೋಡಿ ಗೆ ಸೂಚಿಸಿದ ಸಹಾಯಕ ಆಯುಕ್ತರು ಸೂಚಿಸಿದ್ದಾರೆ ಎಂದರು.


ಮಾಧ್ಯಮಗಳಿಗೆ ಮಾಹಿತಿ ನೀಡಿದ ತಿಮರೋಡಿ ಪರ ವಕೀಲ ವಿಜಯವಾಸು, ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಆದೇಶ ಊರ್ಜಿತ ಮಾಡಲು ಸಹಾಯಕ ಆಯುಕ್ತರು ಸಿದ್ದತೆ ನಡೆಸಿದ್ದರು, ಆದರೆ ಸುಪ್ರೀಂಕೋರ್ಟ್ ಮತ್ತು‌ ಇತರ ನ್ಯಾಯಾಲಯಗಳ ತೀರ್ಪುಗಳ ದಾಖಲೆ ಕೊಟ್ಟು, ತಿಮರೋಡಿ ಭಾಷಣದಿಂದ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ, ಅಲ್ಲದೆ ಮೊದಲ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು ಎಂದು ವಾದಿಸಲಾಗಿದೆ ಎಂದರು.

ಅಲ್ಲದೆ ಈ ಹಿಂದೆ ಹೈಕೋರ್ಟ್ ತಿಮರೋಡಿ ಗಡಿಪಾರಿಗೆ ಸಂಬಂಧಿಸಿದಂತೆ ತಿಮರೋಡಿ ವಿರುದ್ಧ ಸೆಕ್ಷನ್ 55 a ಅಥವಾ 55 b ಪ್ರಕಾರ ಆದೇಶ ಹೊರಡಿಸಲಾಗಿದೆಯೋ ಅನ್ನೋದನ್ನ ಸಹಾಯಕ ಆಯುಕ್ತರಿಂದ ಸ್ಪಷ್ಟನೆ ಕೇಳಿತ್ತು, ಅಲ್ಲದೆ ಡಿಸೆಂಬರ್ 15 ಒಳಗೆ ವರದಿ ನೀಡುವಂತೆ ಸಹಾಯಕ ಆಯುಕ್ತರಿಗೆ ನ್ಯಾಯಾಲಯ ಸೂಚಿಸಿತ್ತು, ಅಲ್ಲಿ ತನಕ ಗಡಿಪಾರು ಆದೇಶಕ್ಕೆ ತಡೆ ನೀಡಿತ್ತು, ಇದೀಗ 55 a ಯಲ್ಲಿ ಅಥವಾ 55b ಯಲ್ಲಿ ಆದೇಶ ನೀಡಲಾಗಿದೆಯೋ ಎನ್ನುವ ವಿಚಾರದಲ್ಲಿ ಸಹಾಯಕ ಆಯುಕ್ತರು ನಮ್ಮಲ್ಲಿ ಸ್ಪಷ್ಟನೆ ಕೇಳಿದ್ದರು. ಅದಕ್ಕೆ ನಾವು ಅವರಲ್ಲಿ ಸಮಯಾವಕಾಶ ಕೊಡಬೇಕು ಎಂದು ಕೇಳಿದ್ದೇವೆ ಎಂದರು.

ಅಲ್ಲದೆ ಪೊಲೀಸರು ತಮ್ಮ ವರದಿಯಲ್ಲಿ 1997 ಹಳೆ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಆ ಎಲ್ಲಾ ಪ್ರಕರಣಗಳು ದೋಷಮುಕ್ತವಾಗಿದೆ. 2 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಅಲ್ಲದೆ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಮೇಲ್ಮನವಿಯನ್ನೂ ಸಲ್ಲಿಸಿಲ್ಲ, ತಿಮರೋಡಿ ಮಾಡಿದ ಭಾಷಣದಿಂದ ಯಾವುದೇ ಕೋಮುಗಲಭೆ, ಅಶಾಂತಿಯಂತಹ ದೊಡ್ಡ ಘಟನೆಗಳು ನಡೆದಿಲ್ಲ, ಈ ಕಾರಣಕ್ಕೆ ನಮಗೆ ಸಮಯಾವಕಾಶವನ್ನು ನೀಡಬೇಕೆಂದು ಆಯುಕ್ತರ ಮುಂದೆ ವಾದಿಸಿದ್ದೇವೆ ಎಂದರು, ಡಿಸೆಂಬರ್ 11 ರಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಅಂದು ಆಕ್ಷೇಪಣೆಯನ್ನು ಸಲ್ಲಿಸುತ್ತೇವೆ, ತೀರ್ಪು‌ ನಮ್ಮ ಪರವಾಗಿ ಬರದಿದ್ದಲ್ಲಿ ಮತ್ತೆ ನ್ಯಾಯಾಲಯದ ಮುಂದೆ ಹೋಗುತ್ತೇವೆ ಎಂದರು.

Share Information