ಚಂದ್ರಾಪುರ (ಮಹಾರಾಷ್ಟ್ರ) ಮಾರ್ಚ್ 28: ಮೂರು ವರ್ಷಗಳ ಹಿಂದೆ ಹಠಾತ್ ಅನಾರೋಗ್ಯದಿಂದ ಸಂಭವಿಸಿದ ಸಾವು ಎಂದು ಮುಚ್ಚಿಹೋಗಿದ್ದ ಪ್ರಕರಣವೊಂದು ಈಗ ರೋಚಕ ತಿರುವು ಪಡೆದುಕೊಂಡಿದೆ. ಪ್ರೇಮ ವಿವಾಹಕ್ಕೆ ಅಡ್ಡಿಯಾಗಿದ್ದ ತಂದೆಯನ್ನೇ ಮಿಲ್ಕ್ಶೇಕ್ನಲ್ಲಿ ವಿಷವಿಕ್ಕಿ ಕೊಂದ ಆರೋಪದ ಮೇಲೆ ಪೊಲೀಸ್ ಪುತ್ರಿ ಹಾಗೂ ಆಕೆಯ ಪತಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

2023ರ ಏಪ್ರಿಲ್ 25ರಂದು ಮಹಾರಾಷ್ಟ್ರ ಪೊಲೀಸ್ ಅಧಿಕಾರಿ ಜಯಂತ್ ಬಲ್ಲವಾರ್ (45) ಅವರು ಕರ್ತವ್ಯಕ್ಕೆ ಹೊರಡುವ ಮುನ್ನ ಮಗಳು ಆರ್ಯ ನೀಡಿದ್ದ ಮಿಲ್ಕ್ಶೇಕ್ ಕುಡಿದಿದ್ದರು. ಕಚೇರಿ ತಲುಪುತ್ತಿದ್ದಂತೆ ಕುಸಿದು ಬಿದ್ದ ಅವರು ಮೃತಪಟ್ಟಿದ್ದರು. ಆ ಸಮಯದಲ್ಲಿ ಯಾವುದೇ ಶಂಕೆ ಬಾರದ ಕಾರಣ, ಮರಣೋತ್ತರ ಪರೀಕ್ಷೆ ನಡೆಸದೆ ‘ಸಹಜ ಸಾವು’ ಎಂದು ಪ್ರಕರಣ ದಾಖಲಿಸಿ ಫೈಲ್ ಮುಚ್ಚಲಾಗಿತ್ತು.
ಆರ್ಯ ತನ್ನ ಪ್ರೇಮ ಸಂಬಂಧಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದರಿಂದ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಳು. ಇದಕ್ಕಾಗಿ ಸೋದರಸಂಬಂಧಿಗೆ 5,000 ರೂ. ನೀಡಿ ವಿಷ ತರಿಸಿಕೊಂಡಿದ್ದಳು. ತಂದೆ ಕಚೇರಿಗೆ ಹೊರಡುವ ತರಾತುರಿಯಲ್ಲಿದ್ದಾಗ ಯಾರಿಗೂ ಅನುಮಾನ ಬರದಂತೆ ಪಾನೀಯದಲ್ಲಿ ವಿಷ ಬೆರೆಸಿದ್ದಳು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಜಯಂತ್ ಅವರ ಸಾವಿನ ನಂತರ ಆರ್ಯ ತನ್ನ ಪ್ರಿಯಕರ ಆಶಿಶ್ ಶೆಡ್ಮಾಕೆಯನ್ನು ವಿವಾಹವಾಗಿದ್ದಳು. ಆದರೆ ಇತ್ತೀಚೆಗೆ ದಂಪತಿಗಳ ನಡುವೆ ಕಲಹ ಆರಂಭವಾಗಿತ್ತು. ಈ ನಡುವೆ ಆಶಿಶ್ನ ದುರ್ನಡತೆಯಿಂದಾಗಿ ಆತನನ್ನು ಪೊಲೀಸ್ ತರಬೇತಿಯಿಂದ ವಜಾಗೊಳಿಸಲಾಗಿತ್ತು. ಜಗಳ ವಿಕೋಪಕ್ಕೆ ಹೋದಾಗ, ಕಳೆದ ವಾರ ಪೊಲೀಸ್ ಠಾಣೆಗೆ ತೆರಳಿದ ಆಶಿಶ್, ಮೂರು ವರ್ಷಗಳ ಹಿಂದೆ ನಡೆದಿದ್ದ ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಆರ್ಯ ಬಲ್ಲವಾರ್: ಮೃತ ಅಧಿಕಾರಿಯ ಪುತ್ರಿ (ಮುಖ್ಯ ಆರೋಪಿ). ಆಶಿಶ್ ಶೆಡ್ಮಾಕೆ: ಆರ್ಯಳ ಪತಿ. ಚೈತನ್ಯ ಗೆಡಮ್: ವಿಷ ಪೂರೈಸಲು ಸಹಾಯ ಮಾಡಿದ ಆರ್ಯಳ ಸೋದರಸಂಬಂಧಿ. ನಾಲ್ಕನೇ ವ್ಯಕ್ತಿ: ವಿಷ ಸರಬರಾಜು ಮಾಡಿದ ಆರೋಪಿ.
ಪ್ರಸ್ತುತ ನಾಲ್ವರೂ ಆರೋಪಿಗಳು ಪೊಲೀಸ್ ವಶದಲ್ಲಿದ್ದು, ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ.