ಮಹಾರಾಷ್ಟ್ರ ಜುಲೈ 09: ಮಹಾರಾಷ್ಟ್ರದಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭೀಕರ ಮಳೆಯ ಆರ್ಭಟಕ್ಕೆ ಪಾತಾಳಗಂಗಾ ನದಿ ಉಕ್ಕಿ ಹರಿಯುತ್ತಿದ್ದು, ರಾಯಗಢ ಜಿಲ್ಲೆಯ ಹೆಚ್ಪಿಸಿಎಲ್ (HPCL) ಗ್ಯಾಸ್ ಬಾಟ್ಲಿಂಗ್ ಘಟಕಕ್ಕೆ ಪ್ರವಾಹದ ನೀರು ನುಗ್ಗಿದೆ. ಇದರ ಪರಿಣಾಮವಾಗಿ ಘಟಕದ ಆವರಣದ ಗೋಡೆ ಕುಸಿದು ಬಿದ್ದಿದ್ದು, ಅಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 3,000 ಎಲ್ಪಿಜಿ ಸಿಲಿಂಡರ್ಗಳು ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ.

ನದಿಯ ನೀರಿನಲ್ಲಿ ಸಾವಿರಾರು ಸಿಲಿಂಡರ್ಗಳು ಸಾಲು ಸಾಲಾಗಿ ತೇಲಿಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.
ಘಟನೆಯ ಗಾಂಭೀರ್ಯ ಅರಿತು ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ರಾಯಗಢ ಜಿಲ್ಲಾಧಿಕಾರಿ ಕಿಶನ್ ಜಾವ್ಲೆ ಅವರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಆದೇಶ ಹೊರಡಿಸಿದ್ದಾರೆ. “ನದಿಯಲ್ಲಿ ಅಥವಾ ನದಿಯ ದಂಡೆಯ ಹತ್ತಿರ ತೇಲಿಬರುವ ಯಾವುದೇ ಸಿಲಿಂಡರ್ಗಳನ್ನು ನಾಗರಿಕರು ಮುಟ್ಟುವುದಾಗಲಿ, ಸಂಗ್ರಹಿಸಿಡುವುದಾಗಲಿ ಅಥವಾ ವೈಯಕ್ತಿಕ ಬಳಕೆಗೆ ಮನೆಗೆ ಕೊಂಡೊಯ್ಯುವುದಾಗಲಿ ಮಾಡಬಾರದು. ಪ್ರವಾಹದ ಹೊಡೆತಕ್ಕೆ ಸಿಲಿಂಡರ್ಗಳು ಸುರಕ್ಷಿತ ಸ್ಥಿತಿಯಲ್ಲಿವೆಯೇ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಕುತೂಹಲದ ಹೆಸರಲ್ಲಿ ಜೀವದ ಜೊತೆ ಚೆಲ್ಲಾಟವಾಡಬೇಡಿ” ಎಂದು ಅವರು ಎಚ್ಚರಿಸಿದ್ದಾರೆ.
ಕೊಚ್ಚಿಕೊಂಡು ಹೋಗಿರುವ ಸಿಲಿಂಡರ್ಗಳು ಎಲ್ಲಿಯಾದರೂ ಕಂಡುಬಂದಲ್ಲಿ ತಕ್ಷಣವೇ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಹೆಚ್ಪಿಸಿಎಲ್ ಆಡಳಿತ ಮಂಡಳಿ ಜನರಲ್ಲಿ ಮನವಿ ಮಾಡಿದೆ. ಸಿಲಿಂಡರ್ಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವ ಬದಲು ಹೆಚ್ಪಿಸಿಎಲ್ ಕಂಪನಿ, ಅಧಿಕೃತ ಗ್ಯಾಸ್ ವಿತರಕರು ಅಥವಾ ಸರ್ಕಾರಿ ಕಚೇರಿಗಳಿಗೆ ಹಸ್ತಾಂತರಿಸಲು ಸ್ಥಳೀಯ ನಿವಾಸಿಗಳಿಗೆ ಸೂಚಿಸಲಾಗಿದೆ. ಸದ್ಯ ವೇಗದಲ್ಲಿ ಹರಿಯುತ್ತಿರುವ ನದಿಯಲ್ಲಿ ಸಿಲಿಂಡರ್ಗಳನ್ನು ಪತ್ತೆಹಚ್ಚಲು ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೆ ಸುಮಾರು 1,000 ಸಿಲಿಂಡರ್ಗಳನ್ನು ಯಶಸ್ವಿಯಾಗಿ ಮರುಪಡೆಯಲಾಗಿದೆ. ಉಳಿದ 2,000 ಸಿಲಿಂಡರ್ಗಳ ಪತ್ತೆಗಾಗಿ ನದಿ ಪಾತ್ರದುದ್ದಕ್ಕೂ ಹದ್ದಿನ ಕಣ್ಣಿಡಲಾಗಿದೆ.