ಮಹಾಕುಂಭ 2025ರ ಮೂಲಕ ದೇಶಾದ್ಯಂತ ಚರ್ಚೆಗೆ ಬಂದಿದ್ದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಹರ್ಷಾ ರಿಛಾರಿಯಾ ಈಗ ಒಂದು ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಧರ್ಮದ ಹಾದಿಯಲ್ಲಿ ನಡೆಯುವುದಾಗಿ ಸಂಕಲ್ಪ ಮಾಡಿದ್ದ ಹರ್ಷಾ, ಈಗ ಈ ಹಾದಿಗೆ ವಿರಾಮ ನೀಡುತ್ತಿರುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ.

ಧರ್ಮದ ಹಾದಿ ಬಿಡುತ್ತಿದ್ದಾರೆ ಹರ್ಷಾ ರಿಛಾರಿಯಾ
ತನ್ನ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ವಿರೋಧ, ಮಾನಸಿಕ ಒತ್ತಡ ಮತ್ತು ಚಾರಿತ್ರ್ಯ ಹನನವೇ ಈ ನಿರ್ಧಾರಕ್ಕೆ ಕಾರಣ ಎಂದು ಹರ್ಷಾ ರಿಛಾರಿಯಾ ತಿಳಿಸಿದ್ದಾರೆ. ಹರ್ಷಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಕಳೆದ ಒಂದು ವರ್ಷದ ನೋವನ್ನು ಬಿಚ್ಚಿಟ್ಟಿದ್ದಾರೆ.
ಹರ್ಷಾ ರಿಛಾರಿಯಾ ನೀಡಿದ ಆಘಾತಕಾರಿ ಮಾಹಿತಿ
ವಿಡಿಯೋದಲ್ಲಿ ಹರ್ಷಾ ಹೀಗೆ ಹೇಳಿದ್ದಾರೆ- “ಪ್ರಯಾಗ್ರಾಜ್ ಮಹಾಕುಂಭ 2025 ರಿಂದ ಆರಂಭವಾದ ಒಂದು ಕಥೆ ಈಗ ಮುಕ್ತಾಯಗೊಳ್ಳುತ್ತಿದೆ ಅಥವಾ ಮುಕ್ತಾಯದ ಹಂತದಲ್ಲಿದೆ. ಈ ಒಂದು ವರ್ಷದಲ್ಲಿ ನಾನು ಸಾಕಷ್ಟು ವಿರೋಧವನ್ನು ಎದುರಿಸಿದ್ದೇನೆ.” ಮಹಾಕುಂಭದ ನಂತರ ವಿರೋಧಗಳು ನಿಲ್ಲಬಹುದು ಎಂಬ ನಿರೀಕ್ಷೆ ತನಗಿತ್ತು, ಆದರೆ ಹಾಗಾಗಲಿಲ್ಲ. ಧರ್ಮದ ಹಾದಿಯಲ್ಲಿ ಮುಂದೆ ಸಾಗುವ ಪ್ರತಿಯೊಂದು ಪ್ರಯತ್ನವನ್ನೂ ತಡೆಯಲಾಯಿತು ಎಂದು ಅವರು ತಿಳಿಸಿದ್ದಾರೆ.
‘ನಾನೇನು ಅಪರಾಧ ಮಾಡಿರಲಿಲ್ಲ’
ತಾವು ಯಾವುದೇ ತಪ್ಪು ಅಥವಾ ಕಾನೂನುಬಾಹಿರ ಕೆಲಸ ಮಾಡಿಲ್ಲ ಎಂದು ಹರ್ಷಾ ಸ್ಪಷ್ಟಪಡಿಸಿದ್ದಾರೆ. “ನಾನು ಕಳ್ಳತನ ಮಾಡುತ್ತಿರಲಿಲ್ಲ, ಯಾವುದೇ ಅಪರಾಧ ಮಾಡುತ್ತಿರಲಿಲ್ಲ. ನಾನು ಕೇವಲ ಧರ್ಮದ ಹಾದಿಯಲ್ಲಿ ನಡೆಯಲು ಪ್ರಯತ್ನಿಸುತ್ತಿದ್ದೆ ಅಷ್ಟೇ,” ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಹರ್ಷಾ ವಿರುದ್ಧ ‘ಧರ್ಮವನ್ನು ವ್ಯವಹಾರ ಮಾಡಿಕೊಂಡಿದ್ದಾರೆ’ ಎಂಬ ಆರೋಪ

ಧಾರ್ಮಿಕ ಜೀವನವನ್ನು ಅಳವಡಿಸಿಕೊಂಡಿದ್ದಕ್ಕಾಗಿ ತಮ್ಮನ್ನು ಸತತವಾಗಿ ಗುರಿ ಮಾಡಲಾಯಿತು, ಇದರಿಂದಾಗಿ ಮಾನಸಿಕ ಸ್ಥೈರ್ಯ ಕುಸಿಯಿತು ಎಂದು ಹರ್ಷಾ ಹೇಳಿದ್ದಾರೆ. ಕೆಲವರು ತಮ್ಮ ಮೇಲೆ ‘ಧರ್ಮವನ್ನು ಧಂದೆ (ವ್ಯವಹಾರ) ಮಾಡಿಕೊಂಡಿದ್ದಾರೆ’ ಎಂಬ ಆರೋಪವನ್ನೂ ಹೊರಿಸಿದ್ದಾರೆ ಎಂದು ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.
“ನಾನು ಮಹಾಕುಂಭದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದೇನೆ ಎಂದು ಜನರು ಹೇಳುತ್ತಾರೆ. ಆದರೆ ಸತ್ಯ ಏನೆಂದರೆ ಇಂದು ನಾನು ಸಾಲದಲ್ಲಿದ್ದೇನೆ,” ಎಂದು ಹರ್ಷಾ ಹೇಳಿದ್ದಾರೆ. ಧರ್ಮದ ಹಾದಿಗೆ ಬರುವ ಮೊದಲು ತಾವು ಒಬ್ಬ ನಿರೂಪಕಿ (Anchor) ಆಗಿದ್ದು, ಒಳ್ಳೆಯ ಹಣ ಸಂಪಾದಿಸುತ್ತಿದ್ದೆ ಮತ್ತು ಜೀವನದಲ್ಲಿ ತೃಪ್ತಿಯಿಂದಿದ್ದೆ. ಆದರೆ ಈ ಹಾದಿಗೆ ಬಂದ ಮೇಲೆ ವೃತ್ತಿಜೀವನವೂ ಹೋಯಿತು ಮತ್ತು ಸಾಥ್ ನೀಡಲು ಯಾರೂ ಉಳಿಯಲಿಲ್ಲ ಎಂದಿದ್ದಾರೆ.
‘ನನ್ನ ಚಾರಿತ್ರ್ಯ ಹನನ ಮಾಡಲಾಗಿದೆ’
ಸಮಾಜದ ಮನಸ್ಥಿತಿಯ ಬಗ್ಗೆಯೂ ಹರ್ಷಾ ಪ್ರಶ್ನೆ ಎತ್ತಿದ್ದಾರೆ. “ಒಬ್ಬ ಹುಡುಗಿಯ ಮನೋಬಲವನ್ನು ನೇರವಾಗಿ ಮುರಿಯಲು ಸಾಧ್ಯವಾಗದಿದ್ದರೆ, ಆಕೆಯ ಚಾರಿತ್ರ್ಯ ಹನನ ಮಾಡುತ್ತಾರೆ. ಆಗ ಆಕೆ ತಾನಾಗಿಯೇ ಕುಸಿದು ಹೋಗುತ್ತಾಳೆ,” ಎಂದು ಹೇಳಿದ್ದಾರೆ. ತಾವು ಪದೇ ಪದೇ ಅಗ್ನಿಪರೀಕ್ಷೆ ನೀಡಲು ‘ಮಾತೆ ಸೀತೆ’ ಅಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.
ಮೌನಿ ಅಮಾವಾಸ್ಯೆಯಂದು ಮಾಘ ಮೇಳದಲ್ಲಿ ಸ್ನಾನ ಮಾಡಿದ ನಂತರ ಧರ್ಮದ ಹಾದಿಯಲ್ಲಿ ನಡೆಯುವ ಸಂಕಲ್ಪಕ್ಕೆ ವಿರಾಮ ನೀಡುವುದಾಗಿ ಹರ್ಷಾ ಸ್ಪಷ್ಟಪಡಿಸಿದ್ದಾರೆ. “ಈಗ ನಾನು ಮತ್ತೆ ನನ್ನ ಹಳೆಯ ಕೆಲಸಕ್ಕೆ ಮರಳುತ್ತೇನೆ. ಇದೇ ನನ್ನ ಅಂತಿಮ ನಿರ್ಧಾರ,” ಎಂದು ಅವರು ತಿಳಿಸಿದ್ದಾರೆ.
ಮದುವೆಯ ಬಗ್ಗೆ ಹರ್ಷಾ ಹೇಳಿದ್ದೇನು?
ಇತ್ತೀಚಿನ ಸಂದರ್ಶನವೊಂದರಲ್ಲಿ ಹರ್ಷಾ ತಮ್ಮ ಮದುವೆಯ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. “ಸದ್ಯಕ್ಕೆ ಮದುವೆಯ ಯಾವುದೇ ಯೋಜನೆ ಇಲ್ಲ. ಜೀವನದಲ್ಲಿ ಮದುವೆ ಆಗುವುದು ಅನಿವಾರ್ಯ ಎಂದು ನನಗನ್ನಿಸುವುದಿಲ್ಲ,” ಎಂದಿದ್ದಾರೆ.
ತಮ್ಮ ಪೋಷಕರು ತಮ್ಮ ಅಭಿಪ್ರಾಯವನ್ನು ಹೇಳುತ್ತಾರೆಯೇ ಹೊರತು ಯಾವುದೇ ಒತ್ತಡ ಹೇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮದುವೆಯ ನಂತರ ಎದುರಾಗುತ್ತಿರುವ ಸಮಸ್ಯೆಗಳನ್ನು ನೋಡಿ ಪೋಷಕರು ಕೂಡ ಹೆದರುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.