DAKSHINA KANNADA
ಶ್ರೀ ಕ್ಷೇತ್ರ ಕುದ್ರೊಳಿಯಲ್ಲಿ ಮಂಗಳೂರು ದಸರಾ 2023 ಕ್ಕೆ ವೈಭವದ ಚಾಲನೆ..!
ಜಗದ್ವಿಖ್ಯಾತ ಮೈಸೂರು ದಸರಾದಷ್ಟೆ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿರುವ ಮಂಗಳೂರು ದಸರಾಕ್ಕೆ ಭಾನುವಾರ ಚಾಲನೆ ದೊರೆತಿದೆ.
ಮಂಗಳೂರು : ಜಗದ್ವಿಖ್ಯಾತ ಮೈಸೂರು ದಸರಾದಷ್ಟೆ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿರುವ ಮಂಗಳೂರು ದಸರಾಕ್ಕೆ ಭಾನುವಾರ ಚಾಲನೆ ದೊರೆತಿದೆ. ನಗರದ ಶ್ರೀ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠೆಯೊಂದಿಗೆ ದಸರಾ-ನವರಾತ್ರಿ ಮಹೋತ್ಸವ ವಿದ್ಯುಕ್ತವಾಗಿ ಪ್ರಾರಂಭಗೊಂಡಿತು.
ಆದಿಶಕ್ತಿ, ಮಹಾಗಣಪತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಿ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿಯರ ಪ್ರತಿಷ್ಠಾಪನೆ ನೆರವೇರಿತು. ಶಾರದೆ ಮಾತೆಯ ಮೂರ್ತಿ ಎಂದಿನಂತೆ ಅತ್ಯಾಕರ್ಷಕವಾಗಿ ರೂಪುಗೊಂಡಿದ್ದು ಭಕ್ತರ ಮನ ಸೆಳೆಯುತ್ತಿದೆ. ಕರ್ನಾಟಕ ಬ್ಯಾಂಕ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಪಂಜ ಅವರು 9 ದಿನಗಳ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಕುದ್ರೊಳಿ ಕ್ಷೇತ್ರದ ಆಧುನೀಕರಣದ ರೂವಾರಿ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ದಂಪತಿ, ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಮೇಯರ್ ಸುಧೀರ್ ಶೆ್ಟ್ಟಿ ಕಣ್ಣೂರು, ಪಾಲಿಕೆಯ ಸದಸ್ಯರುಗಳು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇಂದಿನಿಂದ ಒಂಭತ್ತು ದಿನಗಳ ಕಾಲ ಬಂದರು ನಗರಿ ಮಂಗಳೂರಿನಲ್ಲಿ ದಸರಾ ಸಂಭ್ರಮ ಮೇಳೈಸಲಿದೆ. ಮಂಗಳೂರು ದಸರಾ ಭಾಗವಾಗಿ ಕುದ್ರೋಳಿ ಸೇರಿದಂತೆ ಇಡೀಯ ನಗರದ ಎಲ್ಲಿ ನೋಡಿದರಲ್ಲಿ ಬೆಳಕಿನ ಚಿತ್ತಾರವೇ ಮೂಡಿದೆ. ರಸ್ತೆಗಳಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರವಾಗಿದ್ದು, ನಗರದ ಪ್ರಮುಖ ಕಟ್ಟಡಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ.
ದಸರಾ ಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಪ್ರತಿನಿತ್ಯ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾನ ನಡೆಯಲಿದೆ.
ಈ ಸುಂದರ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡ ನವದುರ್ಗೆಯರು ದೇಶ ವಿದೇಶದ ಭಕ್ತರನ್ನು ಸೆಳೆಯುತ್ತಾರೆ. ಗಣಪತಿ, ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ದಿದಾತ್ರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ ಮಹಾಗೌರಿಯರನ್ನು ಇಲ್ಲಿನ ಸುಂದರ ಕಲಾಕೃತಿಗಳ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಭೂಲೋಕದ ಸ್ವರ್ಗದಂತಿರುವ ಸಭಾಂಗಣದಲ್ಲಿ ಅತ್ಯಾಕರ್ಷಕ ಸಂಯೋಜನೆಯಲ್ಲಿ ಈ 12 ದೇವರುಗಳನ್ನು ನೋಡುವುದು ಭಕ್ತರ ಕಣ್ಣಿಗೊಂದು ಹಬ್ಬ. ಮೈಸೂರು ದಸರಾಕ್ಕೆ ಇದು ಸರಿಸಾಟಿ ಎಂದು ಭಕ್ತರು ಬಣ್ಣಿಸುತ್ತಾರೆ.
ಈ ರೀತಿ ನವರಾತ್ರಿಯ ಸಂದರ್ಭ ದೇವರುಗಳ ಪ್ರತಿಷ್ಠಾಪನೆ ದೇಶದ ಬೇರೆಲ್ಲೂ ಆಗೋದಿಲ್ಲ ಅನ್ನುವುದು ಇಲ್ಲಿನ ವಿಶೇಷತೆ. ನವರಾತ್ರಿಯ ದಿನದಲ್ಲಿ ಪೂಜೆಗೊಳ್ಳುವ ಈ ಎಲ್ಲಾ ಮೂರ್ತಿಗಳನ್ನು ಹತ್ತನೇ ದಿನ ನಗರದಲ್ಲಿ ಸುಮಾರು 7 ಕಿಲೋಮೀಟರ್ ರಾಜರಸ್ತೆಯಲ್ಲಿ ದಸರಾ ಮೆರವಣಿಗೆ ನಡೆದು ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುತ್ತದೆ.
You must be logged in to post a comment Login