ಭೋಪಾಲ್,ಮಾರ್ಚ್ 27: ಜನಪ್ರಿಯ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್ ಪತಿ’ (KBC) ಕಾರ್ಯಕ್ರಮದಲ್ಲಿ 50 ಲಕ್ಷ ರೂಪಾಯಿ ಗೆದ್ದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಮಧ್ಯಪ್ರದೇಶದ ಮಹಿಳಾ ತಹಶೀಲ್ದಾರ್ ಅಮಿತಾ ಸಿಂಗ್ ತೋಮರ್ ಅವರನ್ನು ಭಾರಿ ಭ್ರಷ್ಟಾಚಾರದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. 2021ರ ಪ್ರವಾಹ ಪರಿಹಾರ ನಿಧಿಯಲ್ಲಿ ಸುಮಾರು 2.5 ಕೋಟಿ ರೂಪಾಯಿ ಮೊತ್ತದ ವಂಚನೆ ಎಸಗಿದ ಗಂಭೀರ ಆರೋಪ ಇವರ ಮೇಲಿದೆ.

ಶಿಯೋಪುರ ಜಿಲ್ಲೆಯ ವಿಜಯಪುರದಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತೋಮರ್, ಬಂಧನದ ದಿನದಂದು ಕರ್ತವ್ಯಕ್ಕೆ ಗೈರುಹಾಜರಾಗಿದ್ದರು. ಪೊಲೀಸರ ತಂಡವು ಕಾರ್ಯಾಚರಣೆ ನಡೆಸಿ, ಗ್ವಾಲಿಯರ್ನ ನಾಕಾದಲ್ಲಿರುವ ಅವರ ನಿವಾಸದಲ್ಲಿ ಅವರನ್ನು ವಶಕ್ಕೆ ಪಡೆದಿದೆ. ಈ ಹಿಂದೆ ಅವರು ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರೂ, ಅವರ ಅರ್ಜಿಗಳು ತಿರಸ್ಕೃತಗೊಂಡಿದ್ದವು. ಸದ್ಯ ಅವರನ್ನು ನ್ಯಾಯಾಲಯಕ್ಕೆ ಹಾಜುರುಪಡಿಸಿ, ಶಿವಪುರಿಯ ಮಹಿಳಾ ಜೈಲಿನಲ್ಲಿ ಇರಿಸಲಾಗಿದೆ.
2021ರಲ್ಲಿ ಸಂಭವಿಸಿದ ಭೀಕರ ಪ್ರವಾಹದ ಸಂತ್ರಸ್ತರಿಗೆ ವಿತರಿಸಬೇಕಿದ್ದ ಪರಿಹಾರ ಧನವನ್ನು ಅಕ್ರಮವಾಗಿ ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬುದು ತನಿಖೆಯಿಂದ ಬಯಲಾಗಿದೆ. ಈ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 22 ಕಂದಾಯ ಅಧಿಕಾರಿಗಳು ಮತ್ತು ಒಬ್ಬ ತಹಶೀಲ್ದಾರ್ ಬಂಧನಕ್ಕೊಳಗಾಗಿದ್ದಾರೆ. ಪ್ರಕರಣದಲ್ಲಿ ಒಟ್ಟು 110 ಜನರ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ.