ನವದೆಹಲಿ ಮೇ 01: ಮಧ್ಯಪ್ರದೇಶದ ಬಾರ್ಗಿ ಅಣೆಕಟ್ಟು ಬಳಿಯ ನರ್ಮದಾ ನದಿಯಲ್ಲಿ ಕ್ರೂಸ್ ದೋಣಿಯೊಂದು ಉರುಳಿ ಬಿದ್ದ ಪರಿಣಾಮ ಒಂಬತ್ತು ಮಂದಿ ಸಾವನಪ್ಪಿದ್ದು, ಅದರಲ್ಲಿ ದೆಹಲಿ ಮೂಲದ ತಾಯಿ ಮತ್ತು ಆಕೆಯ ನಾಲ್ಕು ವರ್ಷದ ಮಗು ಸಾವನ್ನಪ್ಪಿದ್ದಾರೆ. ಶುಕ್ರವಾರ ಬೆಳಿಗ್ಗೆ ರಕ್ಷಣಾ ಸಿಬ್ಬಂದಿ ಇಬ್ಬರ ಮೃತದೇಹಗಳನ್ನು ಪತ್ತೆ ಮಾಡಿದ್ದು, ತಾಯಿ ತನ್ನ ಮಗುವನ್ನು ಉಳಿಸುವ ಹತಾಶ ಪ್ರಯತ್ನದಲ್ಲಿ ಎದೆಗೆ ಬಿಗಿದಪ್ಪಿಕೊಂಡ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ.

ದೆಹಲಿಯಿಂದ ಬಂದಿದ್ದ ಪ್ರವಾಸಿಗರ ಕುಟುಂಬದ ಈ ದುರಂತದಲ್ಲಿ ತಂದೆ ಮತ್ತು ಮಗಳು ಪಾರಾಗಿದ್ದಾರೆ. ಬಲವಾದ ಬಿರುಗಾಳಿ ಮತ್ತು ಹವಾಮಾನ ವೈಪರೀತ್ಯದಿಂದಾಗಿ ದೋಣಿ ಅಸಮತೋಲನಗೊಂಡು ನೀರಿನಿಂದ ತುಂಬಲು ಪ್ರಾರಂಭಿಸಿತು. ಕಣ್ಣು ಮಿಟುಕಿಸುವಷ್ಟರಲ್ಲಿ ದೋಣಿ ಮುಳುಗಿದ್ದು, ಜನರು ಸಹಾಯಕ್ಕಾಗಿ ಕಿರುಚುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸೈಯದ್ ರಿಯಾಜ್ ಹುಸೇನ್ ಎಂಬುವವರು ಸುಮಾರು ಎರಡು ಗಂಟೆಗಳ ಕಾಲ ನೀರಿನಲ್ಲಿ ಸಿಲುಕಿಕೊಂಡಿದ್ದರೂ ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಇದುವರೆಗೆ ಅಧಿಕಾರಿಗಳು 24 ಜನರನ್ನು ರಕ್ಷಿಸಿದ್ದು, ಈ ಪೈಕಿ 17 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಐವರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಕಾಣೆಯಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ಸ್ಥಳೀಯ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.